ಹೀರಾನಾಯ್ಕ ಟಿ, ವಿಜಯಪುರ
ಯುಗಾದಿ ಸಮೀಪಿಸುತ್ತಿದೆ. ಎಲ್ಲೆಡೆ ಸಂಭ್ರಮ, ಸಡಗರಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಆದರೆ ಕಬ್ಬು ಮಾರಿದ ರೈತರ ಮನೆಯಲ್ಲಿ ಹಬ್ಬದ ಸಂಭ್ರಮ ಕಸಿದುಕೊಳ್ಳುವಂತಾಗಿದೆ…!
ರಾಜ್ಯದಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ ನೆರೆ ಹಾಗೂ ಬರದ ನಡುವೆಯೂ ರೈತರು ಅಲ್ಪಸ್ವಲ್ಪ ಕಬ್ಬು ಬೆಳೆದು ಸಕ್ಕರೆ ಕಾರ್ಖಾನೆಗಳಿಗೆ ಮಾರಾಟ ಮಾಡಿದ್ದಾರೆ. ಆದರೆ ಅವರಿಗೆ ಇನ್ನು ಬಾಕಿ ಹಣ ಕೈಗೆ ಸೇರಿಲ್ಲ.
ಈಗಾಗಲೇ ಜಿಲ್ಲಾಡಳಿತ ಸಕ್ಕರೆ ಮಾಲೀಕರಿಗೆ ಬಾಕಿ ಹಣ ಪಾವತಿಗೆ ಗಡುವು ನೀಡಿ ವಾರ ಕಳೆಯುತ್ತ ಬಂದಿದೆ. ಆದರೂ ಇನ್ನು ಬಾಕಿ ಹಣ ಪಾವತಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು ಎಂಟು ಸಕ್ಕರೆ ಕಾರ್ಖಾನೆಗಳು 199.24 ಕೋಟಿ ರೂ. ಕಬ್ಬಿನ ಬಾಕಿ ಉಳಿಸಿಕೊಂಡಿವೆ. ಕಳೆದ ಬಾರಿ ಕಬ್ಬಿಗೆ ಬೆಂಬಲ ಬೆಲೆ ಸಿಗದೆ ಬೆಳೆಗಾರರು ಕೈ ಸುಟ್ಟುಕೊಂಡಿದ್ದರು. ಈ ಬಾರಿ ನೆರೆಯಲ್ಲಿ ನಷ್ಟ ಅನುಭವಿಸಿದ್ದ ರೈತರು ಒಂದಿಷ್ಟು ಕಬ್ಬು ಬೆಳೆದಿದ್ದಾರೆ. ಆದರೆ ರೈತರ ಕೈಗೆ ಹಣ ಸಿಗದೆ ಇರುವುದರಿಂದ ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ.
ಬಸವೇಶ್ವರ ಸಕ್ಕರೆ ಕಾರ್ಖಾನೆ 23.66 ಕೋಟಿ ರೂ., ಬಾಲಾಜಿ ಸಕ್ಕರೆ ಕಾರ್ಖಾನೆ 48.83 ಕೋಟಿ ರೂ., ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ 36.56 ಕೋಟಿ ರೂ., ಮನಾಲಿ 9.95 ಕೋಟಿ ರೂ., ಜಮಖಂಡಿ ಷುಗರ್ಸ್-2 16.20 ಕೋಟಿ ರೂ., ಇಂಡಿಯನ್ ಷುಗರ್ಸ್ 19.24 ಕೋಟಿ ರೂ., ಕೆಪಿಆರ್ ಷುಗರ್ಸ್ 11.97 ಕೋಟಿ ರೂ. ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ 32.83 ಕೋಟಿ ರೂ. ಪಾವತಿಸಬೇಕಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲೇ ಅತಿಹೆಚ್ಚು ಕಬ್ಬು ಬೆಳೆಯುವ ಜಿಲ್ಲೆಗಳಲ್ಲಿ ಪೈಕಿ ವಿಜಯಪುರ ಮೂರನೇ ಸ್ಥಾನ ಹೊಂದಿದ್ದು, 2019-20ನೇ ಸಾಲಿನಲ್ಲಿ ಒಟ್ಟು 32.45 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಕಳೆದ 2018-19ನೇ ಸಾಲಿನಲ್ಲಿ 44.47 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿತ್ತು. ಕಳೆದ ಬಾರಿಗಿಂತ ಈ ಬಾರಿ ಕಬ್ಬಿನ ಇಳುವರಿ ಪ್ರಮಾಣ ಕುಸಿದಿದೆ.
ಬಸವೇಶ್ವರ ಸಕ್ಕರೆ ಕಾರ್ಖಾನೆ 4.98 ಲಕ್ಷ, ಬಾಲಾಜಿ 6.10 ಲಕ್ಷ, ಭೀಮಾಶಂಕರ 2.82 ಲಕ್ಷ, ಮನಾಲಿ 1.36 ಲಕ್ಷ, ಜಮಖಂಡಿ ಷುಗರ್ಸ್-2 1.42 ಲಕ್ಷ, ಕೆಪಿಆರ್ ಷುಗರ್ಸ್ 7.05 ಲಕ್ಷ, ಇಂಡಿಯನ್ 1.82 ಲಕ್ಷ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ 6.88 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿವೆ.
ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ರೈತರ ಕಬ್ಬಿನ ಬಿಲ್ ಅನ್ನು ಏಳು ದಿನಗಳರೊಳಗಾಗಿ ಪಾವತಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ೆ.27ರಂದು ಕಾರ್ಖಾನೆಗಳ ವ್ಯವಸ್ಥಾಪಕರಿಗೆ ಗಡುವು ನೀಡಿದ್ದರು. ಆದರೆ 20 ದಿನ ಕಳೆದರೂ ಇನ್ನು ಸಂಪೂರ್ಣ ಬಾಕಿ ಹಣ ಪಾವತಿಯಾಗಿಲ್ಲ.
ಈವರೆಗೆ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳು ಶೇ.79.38 ರಷ್ಟು ಕಬ್ಬಿನ ಬಿಲ್ ಪಾವತಿಸಿವೆ. ಇನ್ನುಳಿದ ಬಾಕಿ ಹಣ ಪಡೆಯಲು ರೈತರು ಕಾರ್ಖಾನೆ ಮಾಲೀಕರ ಬಳಿ ಅಲೆದಾಡುವಂತಾಗಿದೆ.
ಪ್ರತಿ ವರ್ಷವೂ ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರನ್ನು ಶೋಷಣೆ ಮಾಡುತ್ತ ಬರುತ್ತಿವೆ. ಅವರಿಗೆ ಸೂಕ್ತ ಸಮಯದಲ್ಲಿ ಬಾಕಿ ಹಣ ಪಾವತಿಸದೆ ರೈತರನ್ನು ಅಲೆದಾಡಿಸುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾಡಳಿತ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು.
ಶ್ರೀಮಂತ ದುದ್ದಗಿ, ಜಿಲ್ಲಾಧ್ಯಕ್ಷ, ಕಬ್ಬು ಬೆಳೆಗಾರರ ಸಂಘ