*ಹನಿ ನೀರಾವರಿ ವ್ಯವಸ್ಥೆ
* ಗುಜರಾತ್‌ನಿಂದ 500 ಗಿಡ ತಂದು ಪೋಷಣೆ
* ಲಕ್ಷಾಂತರ ರೂ. ಆದಾಯ ಗಳಿಸುವ ನಿರೀಕ್ಷೆ
ಚೇತನ್ ಚಕ್ಕೆರೆ ಬಿಡದಿ
ಭತ್ತ, ರಾಗಿ, ಜೋಳದಂತಹ ಸಾಂಪ್ರದಾಯಿಕ ಕೃಷಿಯಿಂದ ಬೇಸತ್ತಿದ್ದ ರೈತರೊಬ್ಬರಿಗೆ ಡ್ರ್ಯಾಗನ್ ಫ್ರೂಟ್ ವರದಾನವಾಗಿದೆ. ತೋಟಗಾರಿಕೆ ಬೆಳೆಯಾದ ಡ್ರ್ಯಾಗನ್ ಫ್ರೂಟ್ ಬೆಳೆಯುವ ಮೂಲಕ ಲಕ್ಷಾಂತರ ರೂ. ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.
ಹೌದು... ಹೆಗ್ಗಡಗೆರೆ ಗ್ರಾಮದ ಸೋಮಶೇಖರ್ ಡ್ರ್ಯಾಗನ್ ಫ್ರೂಟ್ಸ್ ಬೆಳೆದು ಯಶಸ್ಸು ಕಾಣುತ್ತಿರುವ ಕೃಷಿಕರಾಗಿದ್ದಾರೆ. ಸೋಮಶೇಖರ್ ಅವರ ಒಂದು ಎಕರೆ ಜಮೀನಿನಲ್ಲಿ 2021ರಲ್ಲಿ ಡ್ರ್ಯಾಗನ್ ಫ್ರೂಟ್ಸ್ ಸಸಿಗಳನ್ನು ತಂದು ನಾಟಿ ಮಾಡಿದರು. ಗಿಡ ನೆಟ್ಟಗೆ ನಿಂತು ಹರಡಿಕೊಳ್ಳಲು ಕಲ್ಲಿನ ಕಂಬ ನಿಲ್ಲಿಸಿದರು. ಜತೆಗೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ.
ಸಂಪೂರ್ಣ ಸಾವಯವ ಗೊಬ್ಬರ ಬಳಕೆ ಮಾಡಿದ್ದು, ಒಂದು ಗಿಡಕ್ಕೆ ಕನಿಷ್ಠ 600 ರೂ. ಗಿಂತ ಅಧಿಕ ವೆಚ್ಚ ಮಾಡಿದ್ದಾರೆ. ಒಟ್ಟು 500 ಗಿಡಗಳನ್ನು ಗುಜರಾತ್‌ನಿಂದ ತಂದು ಪೋಷಣೆ ಮಾಡಿದ್ದಾರೆ. ಹೀಗೆ ಒಟ್ಟಾರೆಯಾಗಿ 5 ರಿಂದ 6 ಲಕ್ಷ ರೂ. ಬಂಡವಾಳ ಹಾಕಿದ್ದಾರೆ. ಇದೀಗ ಡ್ರ್ಯಾಗನ್ ಬೆಳೆ ಕೈಗೆ ಬಂದಿದ್ದು, ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. 150 ರೂ. ಪ್ರತಿ ಕೆಜಿಗೆ ಬೆಲೆಗೆ ನಿರೀಕ್ಷೆ ಮಾಡಿದ್ದ ಇವರಿಗೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 110 ರೂ. ಸಿಗುತ್ತಿದೆ.
ಕಡಿಮೆ ತೇವಾಂಶ ಇರುವ ಬಯಲು ಸೀಮೆಯಲ್ಲೂ ಡ್ರ್ಯಾಗನ್ ಹಣ್ಣು ಬೆಳೆಯಬಹುದು ಎಂಬುದನ್ನು ರೈತ ಸೋಮಶೇಖರ್ ಸಾಬೀತು ಮಾಡಿದ್ದಾರೆ. ಹೆಚ್ಚು ಶೀತ ಅಥವಾ ಜವಳು ಭೂಮಿ ಇದ್ದರೆ ಇಳುವರಿ ಕಡಿಮೆಯಾಗಲಿದ್ದು, ಕಡಿಮೆ ತೇವಾಂಶವಿರುವ ಒಣ ಭೂಮಿಯೇ ಈ ಬೆಳೆಗೆ ಸೂಕ್ತವಾಗಿದೆ. ಇದನ್ನು ಮನಗಂಡಿದ್ದ ಇವರು ಹೊಸ ಪ್ರಯೋಗ ಮಾಡುವ ನಿಟ್ಟಿನಲ್ಲಿ ಡ್ರ್ಯಾಗನ್ ಗಿಡಗಳನ್ನು ತಂದು ನೆಟ್ಟು ಯಶಸ್ಸು ಕಂಡಿದ್ದಾರೆ.
ಇದೇ ಮೊದಲ ಬಾರಿಗೆ ಡ್ರ್ಯಾಗನ್ ಫ್ರೂಟ್ ಬೆಳೆದಿರುವ ಸೋಮಶೇಖರ್ ಅವರಿಗೆ ಮಾರುಕಟ್ಟೆ ಬಗ್ಗೆ ಅಷ್ಟಾಗಿ ತಿಳಿಯದಿರುವ ಕಾರಣ ಇವರೇ ಹಣ್ಣುಗಳನ್ನ ಕತ್ತರಿಸಿ ಬೆಂಗಳೂರಿನ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬರುತ್ತಿದ್ದಾರೆ. ಸ್ಥಳೀಯ ವ್ಯಾಪಾರಿಗಳು ನೇರವಾಗಿ ಇಲ್ಲಿಗೆ ಬಂದ ಹಣ್ಣುಗಳನ್ನು ಕೊಂಡುಕೊಂಡು ಹೋಗುತ್ತಿದ್ದಾರೆ.
ಡ್ರ್ಯಾಗನ್ ಫ್ರೂಟ್ಸ್ ಉಷ್ಣವಲಯದ ಹಣ್ಣಾಗಿದ್ದು, ಕೆಂಪು ಚರ್ಮ ಮತ್ತು ವಿಶಿಷ್ಟವಾದ ಹಣ್ಣುಗಳಲ್ಲಿ ಒಂದಾಗಿದೆ. ಈಗ ಎಲ್ಲೆಡೆ ಬಾರಿ ಬೇಡಿಕೆ ಇದೆ. ಪ್ರತಿ ಕೆಜಿಗೆ ಕನಿಷ್ಠ 150 ರೂ.ಗೆ ಮಾರಾಟವಾಗುತ್ತದೆ. ಕಡಿಮೆ ಕ್ಯಾಲೋರಿ ಇರುವ ಹಣ್ಣಾಗಿದ್ದು, ಸುಮಾರು 6 ಕ್ಯಾಲೋರಿ ಹೊಂದಿರುತ್ತದೆ. ಅಲ್ಲದೇ, ಇದು ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಡಿ, ಕಬ್ಬಿಣ, ಕ್ಯಾಲ್ಸಿಯಂ ಹಾಗೂ ರಂಜಕದಂತಹ ಖನಿಜಗಳನ್ನು ಹೊಂದಿದೆ. ಹಾಗಾಗಿ ಈ ಹಣ್ಣು ಇತ್ತೀಚೆಗೆ ಭಾರಿ ಪ್ರಚಲಿತಕ್ಕೆ ಬಂದಿದ್ದು, ಇದನ್ನು ತಿನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಡ್ರ್ಯಾಗನ್ ಫ್ರೂಟ್ ಜತೆಗೆ ಸೇಬು ಬೆಳೆಯುವ ಕಡೆಗೂ ಸೋಮಶೇಖರ್ ಮನಸ್ಸು ಮಾಡಿದ್ದಾರೆ. ಪ್ರಾಯೋಗಿಕವಾಗಿ ನಮ್ಮ ಜಮೀನಲ್ಲಿ ಸೇಬು ಬೆಳೆಯಬಹುದೇ ಎಂದು ಪರೀಕ್ಷೆ ಮಾಡಲು 10 ಗಿಡಗಳನ್ನು ಹಿಮಾಚಲ ಪ್ರದೇಶದಿಂದ ತರಿಸಿ ಕಳೆದ ಎರಡು ವರ್ಷಗಳ ಹಿಂದೆ ನೆಟ್ಟು ಪೋಷಣೆ ಮಾಡಿದ್ದಾರೆ. ಇದೀಗ ಗಿಡಗಳು ಉತ್ತಮವಾಗಿ ಬಂದಿದ್ದು, ಹೂ ಕಚ್ಚಿ ಹಣ್ಣು ಬಿಟ್ಟಿವೆ.
ಮೊ- 9845362023 ಸಂಪರ್ಕಿಸುವ ಸಮಯ - ಬೆಳಗ್ಗೆ 10 ರಿಂದ ಸಂಜೆ 5 ಗಂಟೆ