ಮುದ್ದೇಬಿಹಾಳ: ಶಿರಾಡೋಣ-ಲಿಂಗಸಗೂರು ರಾಜ್ಯ ಹೆದ್ದಾರಿ ಪಕ್ಕದಲ್ಲೇ ನಾರಾಯಣಪುರ ಜಲಾಶಯದ ನೀರನ್ನು ಬೂದಿಹಾಳ ಶುದ್ಧೀಕರಣ ಘಟಕಕ್ಕೆ ಸಾಗಿಸುವ ಬೃಹತ್ ಉಕ್ಕಿನ ಕೊಳವೆಗಳನ್ನು ಅವೈಜ್ಞಾನಿಕವಾಗಿ ಅಳವಡಿಸುತ್ತಿರುವುದಕ್ಕೆ ತಾಲೂಕು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಸಿದರಡ್ಡಿ ಆಕ್ಷೇಪ ವ್ಯಕ್ತಪಡಿಸಿ ಸ್ಥಳದಲ್ಲಿದ್ದ ಸೈಟ್ ಇಂಜಿನಿಯರ್ ಸಂದೀಪ ಅವರನ್ನು ಬುಧವಾರ ತರಾಟೆಗೆ ತೆಗೆದುಕೊಂಡರು.
ಹೆದ್ದಾರಿಯು 45 ಮೀಟರ್ ಅಗಲವಾಗಿದೆ. ಸದ್ಯ 7 ಮೀಟರ್ ಡಾಂಬರೀಕರಣ ಮಾಡಿ ವಾಹನಗಳ ಸಂಚಾರಕ್ಕೆ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು 14 ಮೀಟರ್ ಡಾಂಬರೀಕರಣ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ರಸ್ತೆ ಮಧ್ಯದಿಂದ 22.5 ಮೀಟರ್ ಅಂತರದ ಆಚೆಗೆ ಅಥವಾ ಕೊನೇ ಭಾಗಕ್ಕೆ ಹೊಂದಿಕೊಂಡು ನೆಲಮಟ್ಟದಿಂದ 4-5 ಅಡಿ ಆಳದೊಳಗೆ ಅಳವಡಿಸಬೇಕೆನ್ನುವ ನಿಯಮ ಇದೆ. ಆದರೆ, ಇದನ್ನು ಉಲ್ಲಂಸಿ ಡಾಂಬರ್ ರಸ್ತೆಯಿಂದ ಕೇವಲ 2-3 ಅಡಿ ಅಂತರದಲ್ಲಿ ಪೈಪ್‌ಲೈನ್ ಹಾಕುತ್ತಿರುವುದೇಕೆ? ಭವಿಷ್ಯದಲ್ಲಿ ಸಮಸ್ಯೆಯಾದರೆ ಹೊಣೆಗಾರರು ಯಾರು ಎಂದು ಪ್ರಶ್ನಿಸಿದರು.
ಹೆದ್ದಾರಿ ಎರಡೂ ಬದಿಯ ಜಾಗವನ್ನು ಕೆಲ ರೈತರು ಒತ್ತುವರಿ ಮಾಡಿಕೊಂಡು ರಸ್ತೆ ಕಿರಿದುಗೊಳಿಸಿದ್ದಾರೆ. ಈಗ ರಸ್ತೆ ಮಧ್ಯದಿಂದ ಕೇವಲ 8-10 ಮೀಟರ್ ಅಂತರದಲ್ಲಿ ಪೈಪ್‌ಲೈನ್ ಅಳವಡಿಸಿದರೆ ಮುಂದೆ ರಸ್ತೆ ಮಧ್ಯದಿಂದ 14 ಮೀಟರ್ ಡಾಂಬರೀಕರಣ ಮಾಡುವಾಗ ಸಮಸ್ಯೆ ಆಗುವುದಿಲ್ಲವೇ? ಇದು ಗೊತ್ತಿದ್ದರೂ ಮನಸೋ ಇಚ್ಛೆ ಪೈಪ್‌ಲೈನ್ ಮಾಡುತ್ತಿರುವುದು ಏಕೆ ಎಂದು ಬೆಂಡೆತ್ತಿದರು.
ಸಿದರಡ್ಡಿ ಅವರ ಪ್ರಶ್ನೆಗಳಿಗೆ ಉತ್ತರಿಸುಲು ತಡಬಡಾಯಿಸಿದ ಇಂಜಿನಿಯರ್, ಪಿಡಬ್ಲುೃಡಿ ರಸ್ತೆ 45 ಮೀಟರ್ ಅಗಲವಾಗಿದ್ದು, ಅದನ್ನು ಬಿಟ್ಟು ಪೆಪ್‌ಲೈನ್ ಹಾಕುವಂತೆ ಹೇಳುತ್ತಾರೆ. ಹಾಗೆ ಮಾಡಲು ಹೋದರೆ ರೈತರು, ಅರಣ್ಯ ಇಲಾಖೆಯವರು ತಕರಾರು ತೆಗೆಯುತ್ತಿದ್ದಾರೆ. ರಸ್ತೆ ಪಕ್ಕದಲ್ಲಿ ಹಾಕಿದರೆ ಯಾರೂ ಸಮಸ್ಯೆ ಮಾಡುವುದಿಲ್ಲ. ಹೀಗಾಗಿ ಮೇಲಿನವರ ನಿರ್ದೇಶನದಂತೆ ರಸ್ತೆ ಪಕ್ಕದಲ್ಲಿ ಪೈಪ್‌ಲೈನ್ ಹಾಕುತ್ತಿದ್ದೇವೆ. 25 ವರ್ಷ ನಿರ್ವಹಣೆ ಜವಾಬ್ದಾರಿ ಗುತ್ತಿಗೆ ಕಂಪನಿಗೆ ಇದ್ದು, ಸಮಸ್ಯೆ ಆದಲ್ಲಿ ಅವರು ತಕ್ಷಣ ಅಟೆಂಡ್ ಮಾಡಿ ಸರಿಪಡಿಸುತ್ತಾರೆ ಎಂದು ಸಬೂಬು ಹೇಳಲು ಯತ್ನಿಸಿದರು.
ಇದನ್ನೊಪ್ಪದ ಸಿದರಡ್ಡಿ, ಯೋಜನೆಯ ಉಸ್ತುವಾರಿ ಹೊತ್ತಿರುವ ಗ್ರಾಮೀಣ ನೀರು ಸರಬರಾಜು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್.ಎಸ್. ಹಿರೇಗೌಡರ ಅವರೊಂದಿಗೆ ಮಾತನಾಡಿ, ಅವೈಜ್ಞಾನಿಕ ಕೆಲಸವನ್ನು ಗಮನಕ್ಕೆ ತಂದು ತಕ್ಷಣ ಈಗ ನಡೆಯುತ್ತಿರುವ ಕೆಲಸ ನಿಲ್ಲಿಸಿ ವೈಜ್ಞಾನಿಕವಾಗಿ, ನಿಯಮದಂತೆ ಕೆಲಸ ಮಾಡಿಸಲು ಮುಂದಾಗಬೇಕು. ಇಲ್ಲವಾದರೆ ರೈತರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದರಡ್ಡಿ ಅವರು, ಪೈಪ್‌ಲೈನ್ ಹಾಕಲು ತಕರಾರು ತೆಗೆಯುವ ರೈತರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ಇದ್ದರೂ ಕಡೆಗಣಿಸಲಾಗಿದೆ. ಈಗಲೇ ಎಚ್ಚೆತ್ತುಕೊಂಡು ನಿಯಮದಂತೆ ಕೆಲಸ ಮಾಡಿದರೆ ಭವಿಷ್ಯದಲ್ಲಿ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟಬಹುದು. ನಮ್ಮ ಆಕ್ಷೇಪವನ್ನು ಇಂಜಿನಿಯರ್‌ಗಳು, ಅಧಿಕಾರಿಗಳಿಗೆ ತಿಳಿಸಿದ್ದೇವೆ. ನಿರ್ಲಕ್ಷೃದಿಂದ ಹೀಗೇ ಕೆಲಸ ಮುಂದುವರಿಸಿದರೆ ರೈತರೊಂದಿಗೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.