ಜಿಲ್ಲೆ

ರೊಟೇಶನ್ ಉಲ್ಲಂಘನೆಗೆ ಖಂಡನೆ

Davangere - Desk - Shobha Krishna Gowda

ಮಲೇಬೆನ್ನೂರು: ರೊಟೇಶನ್ ಪ್ರಕಾರ ಭದ್ರಾ ನಾಲಾ ಉಪವಿಭಾಗ ವ್ಯಾಪ್ತಿಯ 10ನೇ ವಲಯದ ಉಪನಾಲೆ ಬಂದ್ ಮಾಡದ ಕಾರಣ ಕೊನೆ ಭಾಗಕ್ಕೆ ನೀರು ಬರುತ್ತಿಲ್ಲ ಎಂದು ಆರೋಪಿಸಿ ಕೊನೆ ಭಾಗದ ರೈತರು ಬುಧವಾರ, ಪಟ್ಟಣದ ನೀರಾವರಿ ನಿಗಮ ಕಚೇರಿ ಎದುರಿನ ರಾಜ್ಯ ಹೆದ್ದಾರಿ ತಡೆಹಿಡಿದು ಪ್ರತಿಭಟನೆ ನಡೆಸಿದರು.

ರೊಟೇಶನ್ ಪ್ರಕಾರ ಭದ್ರಾ ಉಪನಾಲೆಗಳಾದ 10ಎ, 10, 12, 12ಎ, 11ಬಿ, 14ನೇ ಜೋನ್ ನಾಲೆಗಳು ಫೆ.12 ರಿಂದ ಬಂದ್ ಇರಬೇಕಿತ್ತು. ಆದರೆ, ಆ ಭಾಗದ ರೈತರ ಒತ್ತಡಕ್ಕೆ ಮಣಿದು ಎಇಇ 10 ನೇ ಜೋನ್ ನಾಲೆಯಲ್ಲಿ ನೀರು ಮುಂದುವರಿಸಿದ್ದರಿಂದ ಬುಧವಾರದಿಂದ 10 ದಿನಗಳವರೆಗೆ ನೀರು ಹರಿಯುವ ಕೊನೆ ಭಾಗದ 11ಎ, 13, 11ಸಿ, 11ಡಿ, 11ಇ, 11ಎಫ್, 15, 16, 17ನೇ ಜೋನ್ ಉಪನಾಲೆಗಳಿಗೆ ನೀರು ಬರುತ್ತಿಲ್ಲ ಎಂದು ಕೊನೆ ಭಾಗದ ಹೊಳೆಸಿರಿಗೆರೆ, ಕಮಲಾಪುರ, ಲಕ್ಕಶೆಟ್ಟಿಹಳ್ಳಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ, ಸಮಸ್ಯೆಗಳ ಕುರಿತು ಭದ್ರಾ ಕಚೇರಿ ಇಂಜಿನಿಯರ್​ಗಳೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಿ, ರಸ್ತೆ ತಡೆ ಕೈಬಿಟ್ಟು ಸಹಕರಿಸಿ ಎಂದು ರೈತರಿಗೆ ಮನವೊಲಿಸಿದರು. ಬಳಿಕ ರೈತರು ಭದ್ರಾ ಕಚೇರಿಯಲ್ಲಿ ಪ್ರತಿಭಟನೆ ಮುಂದುವರಿಸಿದರು.

ಮಲೇಬೆನ್ನೂರು ಉಪ ವಿಭಾಗದ ಎಇಇ ಕೃಷ್ಣಮೂರ್ತಿ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದರಿಂದ, ಬಸವಾಪಟ್ಟಣ ಎಇಇ ಧನಂಜಯ ರೈತರೊಂದಿಗೆ ಮಾತನಾಡಿ, ರೈತರ ಒತ್ತಡದ ಮೇರೆಗೆ ಒಂದು ದಿನ ಮಾತ್ರ 10 ನೇ ಜೋನ್ ಉಪನಾಲೆಯಲ್ಲಿ ನೀರು ಮುಂದುವರಿಸಿರುವುದಾಗಿ ಎಇಇ ಕೃಷ್ಣಮೂರ್ತಿ ದೂರವಾಣಿ ಮೂಲಕ ತಿಳಿಸಿದ್ದಾರೆ ಎಂದು ತಿಳಿಸಿದರು.

ರೊಟೇಶನ್ ಪ್ರಕಾರ ಕೂಡಲೇ 10ನೇ ಜೋನ್ ಉಪನಾಲೆ ಬಂದ್ ಮಾಡಿ, ಇಲ್ಲವೇ ನಮಗೂ 11ದಿನ ನೀರು ಹರಿಸಿ. ರೊಟೇಶನ್ ಬದಲಾವಣೆ ಮಾಡುವುದಾದರೆ ಒಂದು ದಿನ ಮೊದಲೇ ರೈತರಿಗೆ ಪ್ರಕಟಣೆ ಹೊರಡಿಸಬೇಕು. ರೊಟೇಶನ್ ಉಲ್ಲಂಘನೆ ಮಾಡಿದರೆ, ಕೊನೆ ಭಾಗಕ್ಕೆ ನೀರು ತಲುಪಲು ಹೇಗೆ ಸಾಧ್ಯ ಎಂದು ರೈತರು ಇಂಜಿನಿಯರ್​ಗೆ ತರಾಟೆ ತಗೆದುಕೊಂಡರು.

ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಎಇಇ ಧನಂಜಯ್ ಅವರು 10 ನೇ ಜೋನ್ ಉಪನಾಲೆ ಬಂದ್ ಮಾಡಿಸಿದರು.

ಗ್ರಾಪಂ ಅಧ್ಯಕ್ಷ ರಮೇಶ್, ಮಲ್ಲಿಕಾರ್ಜುನ್, ಬಳ್ಳಾರಿ ಕರಿಬಸಪ್ಪ, ದೊಡ್ಡಬಸಪ್ಪ, ಕರಿಬಸಪ್ಪ ಬೆನ್ನೂರು, ಮೂಕಪ್ಪ, ರಾಮಣ್ಣ, ಹಳೆಮನೆ ನಾಗರಾಜ್, ಗಂಗಾಧರ, ಕೊಟ್ರೇಶ್, ಷಣ್ಮುಖಪ್ಪ, ಮಲ್ಲಪ್ಪ, ಗಣೇಶ್, ಬೀರಪ್ಪ, ವಸಂತಣ್ಣ, ನಾಗರಾಜ್ ಮತ್ತಿತರರು ಇದ್ದರು.