ತಿಪಟೂರು : ರಾಷ್ಟ್ರೀಯ ಹೆದ್ದಾರಿ 206ರ ಭೂಮಿ ಬಿಟ್ಟುಕೊಟ್ಟು ನಾವು ಬೀದಿ ಪಾಲಾಗಲು ಸಿದ್ಧರಿಲ್ಲ. ಹೆದ್ದಾರಿ ರದ್ದುಗೊಳಿಸಿ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಒತ್ತಾಯಿಸಿ ರೈತ-ಕೃಷಿ ಕಾರ್ಮಿಕರ ಸಂಘಟನೆ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್ ಬಿ.ಆರತಿಗೆ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಹೆದ್ದಾರಿಗೆ ಭೂಮಿ ಬಿಟ್ಟು ಕೊಡುವ ರೈತರಿಗೆ ಪರಿಹಾರ ನೀಡುವಲ್ಲಿ ಭೂ ಸ್ವಾಧೀನ ಕಾಯ್ದೆ 2013ರ ಸೆಕ್ಷನ್ 26, ಮತ್ತು ಉಪಸೆಕ್ಷನ್ 2 ಪರಿಗಣಿಸಿಲ್ಲ. ಜಮೀನಿನ ಅಕ್ಕಪಕ್ಕದ ಹಳ್ಳಿ, ಪ್ರದೇಶದ ದರ ಲೆಕ್ಕಕ್ಕೆ ತೆಗೆದುಕೊಳ್ಳದೆ ಕೇವಲ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾದ ಜಮೀನಿನ ದರ ಪರಿಗಣಿಸಲಾಗುತ್ತಿದೆ ಎಂದು ಮುಖಂಡ ಮನೋಹರ್ ಪಟೇಲ್ ಆರೋಪಿಸಿದರು.
ಪರಿಹಾರ ನೀಡಿ ಭೂಮಿ ವಶಪಡಿಸಿಕೊಳ್ಳದೆ, ಪೊಲೀಸರ ನೆರವಿನೊಂದಿಗೆ ದಬ್ಬಾಳಿಕೆ ನಡೆಸುವ ಕೆಲಸ ನಡೆದಿದೆ. ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿ ಮತ್ತು ಯೋಜನಾ ನಿರ್ದೇಶಕ ಕಚೇರಿಯಲ್ಲಿ ಪರಿಹಾರ ನಿಗದಿ ಹಾಗೂ ಪರಿಹಾರದ ಹಣ ರೈತರಿಗೆ ಸಂದಾಯವಾಗುವಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಪರಿಹಾರ ನಿಗದಿಪಡಿಸುವಲ್ಲಿ ಪ್ರಭಾವಿಗಳಿಗೆ ಮಣೆ ಹಾಕಲಾಗುತ್ತಿದೆ. ಕೆಲವೆಡೆ ಸಂತ್ರಸ್ತರಿಗೆ ಪರಿಹಾರ ನೀಡಲು ಕಮಿಷನ್ ಕೇಳುವ ಏಜೆಂಟರು ಹುಟ್ಟಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕಳೆದ ಮೂರು ವರ್ಷಗಳಿಂದ ಜಮೀನು, ಮನೆ ಕಳೆದುಕೊಂಡ ಮಾಲೀಕರಿಗೆ ನ್ಯಾಯಯುತ ಬೆಲೆ ನೀಡಬೇಕೆಂದು ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ. ರೈತರಿಗೆ ಸೂಕ್ತ ಪರಿಹಾರ ಬಿಡುಗಡೆ ಮಾಡುವವರೆಗೂ ಬೈ ಪಾಸ್ ರಸ್ತೆ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದರು.