ದೇವದುರ್ಗ: ಬರಗಾಲ, ನೀರಿನ ಕೊರತೆ ನಡುವೆಯೂ ಭತ್ತ ಬೆಳೆದ ರೈತರಿಗೆ ಸುಳಿಗಾಳಿ, ತುಂತುರು ಮಳೆ ಜೀವಹಿಂಡುತ್ತಿದ್ದು, ಭತ್ತ ನೆಲಕ್ಕುರುಳುತ್ತಿದೆ. ಬೇಸಿಗೆ ಭತ್ತ ಅತಿಸೂಕ್ಷ್ಮಬೆಳೆಯಾಗಿದ್ದು, ಸ್ವಲ್ಪ ಸುಳಿಗಾಳಿ ಬೀಸಿದರೂ ಧರಾಶಾಹಿಯಾಗುತ್ತದೆ. ನಾಲ್ಕೈದು ದಿನಗಳಿಂದ ವಾತಾವರಣ ಬದಲಾಗಿದ್ದು, ಹಗಲಿನಲ್ಲಿ ವಿಪರೀತ ಬಿಸಿಲು ರಾತ್ರಿ ಬೀಸುವ ಸುಳಿಗಾಳಿ ಬೆಳೆಗಳಿಗೆ ಕಂಟಕವಾಗಿದೆ.
ಇದನ್ನೂ ಓದಿ: ಸುಳಿಗಾಳಿ ಮಳೆಗೆ ಹಾನಿ
ಜಾಲಹಳ್ಳಿ ಹೋಬಳಿಯಲ್ಲಿ ಅತಿಹೆಚ್ಚು ಭತ್ತ ಬೆಳೆಯುತ್ತಿದ್ದು, ಸೋನಾ ಮಸೂರಿ, ಆರ್‌ಎನ್‌ಆರ್, ಕಾವೇರಿ ಸೋನಾ ಅತಿಹೆಚ್ಚು ಬೆಳೆಯುತ್ತಿದ್ದು, ಉತ್ತಮ ಇಳುವರಿ, ಕಡಿಮೆ ದಿನದಲ್ಲಿ ಭತ್ತ ಕೈಸೇರುತ್ತದೆ ಎನ್ನುವ ದೃಷ್ಟಿಯಿಂದ ರೈತರು ಆರ್‌ಎನ್‌ಆರ್ ಬೆಳೆಗೆ ಜೋತುಬಿದ್ದಿದ್ದಾರೆ.
ಸೋನಾ ಮಸೂರಿ ಹಾಗೂ ಕಾವೇರಿ ಸೋನಾಗಿಂತ ಆರ್‌ಎನ್‌ಆರ್ ಅತಿಸೂಕ್ಷ್ಮಬೆಳೆಯಾಗಿದೆ. ಇದರ ಕಾಂಡ ಸೋನಾಗಿಂತ ಕಡಿಮೆ ತೆಳುವ ಹೊಂದಿದೆ. ಅಲ್ಲದೆ ತೇವಾಂಶ ಕಡಿಮೆಯಾಗಿ, ಕಾಳುಕಟ್ಟಿದ ಭಾರಕ್ಕೆ ಮಳೆ, ಗಾಳಿಗೆ ಭತ್ತ ನೆಲಕ್ಕುರುಳುತ್ತದೆ. ಇದರಿಂದ ಕಾಳುಗಳು ಉದುರುವವು.
ಜಾಲಹಳ್ಳಿ, ಗಲಗ, ಮುಂಡರಗಿ, ಸೋಮನಮರಡಿ, ಗಾಣಧಾಳ, ಕಮಲದಿನ್ನಿ, ಕಕ್ಕಲದೊಡ್ಡಿ, ಲಿಂಗದಹಳ್ಳಿ, ಹೊಸೂರು ಸಿದ್ದಾಪುರ ಸೇರಿ ವಿವಿಧೆಡೆ ಎರಡನೇ ಬೆಳೆಯಾಗಿ ಭತ್ತ ಬೆಳೆದಿದ್ದಾರೆ. ಆರ್‌ಎನ್‌ಆರ್ 105 ರಿಂದ 110 ದಿನಗಳಲ್ಲಿ ಕೈಗೆ ಬರಲಿದೆ. ಬೇಸಿಗೆ ಬೆಳೆಗೆ ನೀರಿನ ಕೊರತೆ ಎದುರಾಗುವ ಆತಂಕದಿಂದ ರೈತರು ಆರ್‌ಎನ್‌ಆರ್‌ಗೆ ಮೊರೆ ಹೋಗಿದ್ದಾರೆ. ಆದರೆ, ಮಧ್ಯರಾತ್ರಿ ಬಿಡುವ ಸುಳಿಗಾಳಿ ಸಂಕಷ್ಟ ತಂದಿದೆ.
ಗಲಗ ಗ್ರಾಮದಲ್ಲಿ 70 ಹೆಕ್ಟೇರ್‌ಗೂ ಅಧಿಕ, ಸೋಮನಮರಡಿ, ಜಾಲಹಳ್ಳಿ, ಗಾಣಧಾಳ, ಮುಂಡರಗಿ ಸೇರಿ ವಿವಿಧೆಡೆ 200ಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಭತ್ತ ಧರಾಶಾಹಿಯಾಗಿದೆ. ಎಕರೆಗೆ 35-40 ಸಾವಿರ ರೂ. ಖರ್ಚು ಮಾಡಿ, ನೀರಿನ ಕೊರತೆ ನಡುವೆ ರೈತರು ಭತ್ತದ ಬೆಳೆ ಉಳಿಸಿಕೊಂಡಿದ್ದಾರೆ. ರಾಶಿ ಹಂತದಲ್ಲಿ ಸುಳಿಗಾಳಿ ರೈತರ ಬಾಳಿಗೆ ಬಿರುಗಾಳಿಯಾಗಿ ಕಾಡುತ್ತಿದೆ. ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸರ್ವೇ ಮಾಡಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಎಡಿ, ಕೃಷಿ ಇಲಾಖೆಶ್ರೀನಿವಾಸ್ ನಾಯಕಅಕಾಲಿಕ ಮಳೆ ಹಾಗೂ ಸುಳಿಗಾಳಿಗೆ ಹಲವು ಕಡೆ ಭತ್ತ ನೆಲಕ್ಕುರುಳಿದೆ. ಜಾಲಹಳ್ಳಿ, ಅರಕೇರಾ ಹೋಬಳಿ ಅತಿಹೆಚ್ಚು ಭತ್ತ ಬೆಳೆಯಲಾಗಿದೆ. ಗಲಗ ಗ್ರಾಮದಲ್ಲಿ 70 ಹೆಕ್ಟೇರ್ ಭತ್ತ ಹಾನಿಗೀಡಾಗಿದೆ. ವಿವಿಧೆಡೆ ಹಾಳಾದ ಭತ್ತದ ಬೆಳೆ ಸಮೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುತ್ತೇವೆ. ಬೇಸಿಗೆ ಅವಧಿಗೆ ಸುಮಾರು 25 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡಲಾಗಿದೆ. ಗಲಗ ಗ್ರಾಮದ ರೈತಮಲ್ಲಿಕಾರ್ಜುನಇತ್ತೀಚೆಗೆ ಸುರಿದ ಅಕಾಲಿಕ ಮಳೆ ಹಾಗೂ ನಿತ್ಯ ಬೀಸುವ ಸುಳಿಗಾಳಿಗೆ ಗ್ರಾಮದ ಬಹುತೇಕ ರೈತರ ಭತ್ತ ನೆಲಕ್ಕುರುಳಿದೆ. ಇಳುವರಿ ಬೇಗ ಬರಲಿದೆ ಎನ್ನುವ ಕಾರಣಕ್ಕೆ ರೈತರು ಆರ್‌ಎನ್‌ಆರ್ ಹಾಕಿದ್ದು, ಇದು ಸೂಕ್ಷ್ಮವಾದ ಬೆಳೆಯಾಗಿದೆ. ತೇವಾಂಶ ಕೊರತೆಯೂ ಕಾರಣವಿರಬಹುದು. ಅಧಿಕಾರಿಗಳು ಸಮೀಕ್ಷೆ ನಡೆಸಿ ರೈತರಿಗೆ ವೈಜ್ಞಾನಿಕ ಬೆಳೆಪರಿಹಾರ ನೀಡಬೇಕು.