ಕೊಪ್ಪಳ ತಾಲೂಕಿನ ಹೊಸಳ್ಳಿಯಲ್ಲಿ ಶನಿವಾರ ವಿವಿಧ ಪಕ್ಷದ ಮುಖಂಡರು ಶಾಸಕ ರಾಘವೇಂದ್ರ ಹಿಟ್ನಾಳ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.  
ಜಿಲ್ಲೆ

ರೈತರ ಜೀವನ ಜತೆ ಚೆಲ್ಲಾಟವಾಡುತ್ತಿರುವ ಮೋದಿ - ಶಾಸಕ ರಾಘವೇಂದ್ರ ಹಿಟ್ನಾಳ್ ಆರೋಪ

ಕೊಪ್ಪಳ: ಜನಪರ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾಗಿವೆ. ಬಿಜೆಪಿ ಆಡಳಿತದಲ್ಲಿ ಯಾವೊಂದು ಜನಪರ ಯೋಜನೆ ಜಾರಿಯಾಗಿಲ್ಲವೆಂದು ಶಾಸಕ ರಾಘವೇಂದ್ರ ಹಿಟ್ನಾಳ್ ಆರೋಪಿಸಿದರು.

ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಶನಿವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಜನರಿಗೆ ಬಿಜೆಪಿ ನೀಡಿದ ಆಶ್ವಾಸನೆಗಳಿಗೆ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಸಲಾಗಿದೆ. ಸ್ವಿಸ್ ಬ್ಯಾಂಕಿನಿಂದ ಕಪ್ಪು ಹಣ 7 ವರ್ಷವಾದರೂ ಬಂದಿಲ್ಲ. ಬಡವರ ಖಾತೆಗೆ 15 ಲಕ್ಷ ರೂ. ಜಮಾ ಆಗಿಲ್ಲ.

ದೇಶದ ಯುವಕರಿಗೆ ವಾರ್ಷಿಕ 2 ಕೋಟಿ ಉದ್ಯೋಗ ಕಲ್ಪಿಸಲಾಗುವುದು ಎಂದು ಹೇಳಿ, ಚಹಾ ಮತ್ತು ಪಕೋಡಾ ಮಾರಲು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಸುಳ್ಳಿನ ಸರದಾರ. ದೇಶದ ರೈತರರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ಜಾರಿ ಮಾಡಿ ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ಸಿಗುವಂತೆ ಯೋಜನೆಗಳನ್ನು ರೂಪಿಸಿ ಸರ್ವ ಜನರ ಕಲ್ಯಾಣಕ್ಕೆ ಬದ್ಧವಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಹಲವರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಗ್ರಾಪಂ ಅಧ್ಯಕ್ಷೆ ರಾಜಮ್ಮ ವೆಂಕಟೇಶ, ಉಪಾದ್ಯಕ್ಷ ಸುರೇಶ ಛಲವಾದಿ, ಸದಸ್ಯರಾದ ರೇಣುಕಾ ಹುಲಿಯಪ್ಪ, ಕವಿತಾ ಹನುಮಂತಪ್ಪ, ಶರಿಫ್ ಸಾಬ್ ದೊಡ್ಡಮನಿ, ಮಾರುತಿ ಬಗನಾಳ , ಲಕ್ಷ್ಮೀ ದೇವಿ ಭಜಂತ್ರಿ, ಮುಖಂಡರಾದ ಅಕ್ಬರಪಾಷಾ ಪಲ್ಟನ್, ಸಂಪತ್ ಮಣ್ಣೂರು, ಮಂಜುನಾಥ ಕಲಾಲ್, ಪಂಚಾಕ್ಷರಯ್ಯ ಹಿರೇಮಠ ಇತರರಿದ್ದರು.