ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೊಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತಿನ ಹಣ ದೇಶದ 8.5 ಕೋಟಿಗೂ ಹೆಚ್ಚು ಫಲಾನುಭವಿ ರೈತರ ಖಾತೆಗಳಿಗೆ 17 ಸಾವಿರ ಕೋಟಿ ರೂ. ಬಿಡುಗಡೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಇದರಲ್ಲಿ ಧಾರವಾಡ ಜಿಲ್ಲೆಯ 1.08 ಲಕ್ಷ ರೈತರ ಖಾತೆಗೆ 21.65 ಕೋಟಿ ರೂ. ಜಮೆಯಾಗಿದೆ. ರಾಜ್ಯದ ಒಟ್ಟು 50.45 ಲಕ್ಷ ರೈತರಿಗೆ 1,009 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಮಯದಲ್ಲಿ ರೈತರಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳು ದೊರಕುವ 1.25 ಲಕ್ಷ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಪ್ರಧಾನಿ ಮೋದಿಯವರು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಇದರಲ್ಲಿ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ 225 ಕೇಂದ್ರಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಹಣ ಜಮೆಯಾಗದೆ ಇರುವ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಜಠಿಠಿಟ://ಟಞkಜಿಠಚ್ಞ.ಜಟಡ.ಜ್ಞಿ ಇ-ಕೆವೈಸಿಯಲ್ಲಿ ನೋಂದಾಯಿಸಿದ ನಂತರ ರೈತರ ಖಾತೆಗೆ ಹಣ ಜಮೆಯಾಗಲಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸದಾಕಾಲ ರೈತರ ಪರವಾಗಿ ಇದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.
ಶ್ರಾವಣ ಮಾಸ ಬರಲಿರುವ ಈ ಸಮಯದಲ್ಲಿ ಬಿಡುಗಡೆಯಾಗಿರುವ ಈ ಹಣ ರೈತರ ಬಾಳು ಹಸನಾಗಲು ಸಹಕಾರಿಯಾಗುವುದೆಂಬ ಆಶಯವಿದೆ. ಧಾರವಾಡ ಜಿಲ್ಲೆಯ ರೈತರು ಯೋಜನೆಯ ಪ್ರಯೋಜನಗಳನ್ನು ಪಡೆಯಲು ಕೋರುತ್ತೇನೆ ಎಂದು ಸಚಿವ ಜೋಶಿ ಹೇಳಿದ್ದಾರೆ.