ಪುರುಷೋತ್ತಮ 
ಜಿಲ್ಲೆ

ಕಾಡಾನೆ ದಾಳಿಗೆ ಬೆಳೆಗಾರ ಬಲಿ

ರವಿಕುಮಾರ್ ಪಿ. ಕೆ

ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ಮನೆಯ ಸಮೀಪವೇ ಕಾಫಿ ತೋಟ ನೋಡಲು ತೆರಳಿದ ಬೆಳೆಗಾರನ ಮೇಲೆ ಕಾಡಾನೆ ದಾಳಿ ಮಾಡಿ ಬಲಿ ತೆಗೆದುಕೊಂಡಿದೆ.

ಗ್ರಾಮದ ಕುಕ್ಕುನೂರು ಪುರುಷೋತ್ತಮ(78) ಎಂಬುವರೇ ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟವರು. ಶುಕ್ರವಾರ ಸಂಜೆ ತೋಟಕ್ಕೆ ತೆರಳಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಏಕಾಏಕಿ ಎದುರಿಗೆ ಬಂದ ಕಾಡಾನೆ ಪುರುಷೋತ್ತಮ ಅವರ ಮೇಲೆ ದಾಳಿಗೆ ಮುಂದಾಗಿದೆ. ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪತ್ನಿಯೊಂದಿಗೆ ವಾಸವಾಗಿದ್ದ ಪುರುಷೋತ್ತಮ ತೋಟಕ್ಕೆ ತೆರಳಿ ರಾತ್ರಿ ಒಂಬತ್ತು ಗಂಟೆವರೆಗೂ ಮನೆಗೆ ಬಾರದ ಹಿನ್ನೆಲೆ ಸಂಬಂಧಿಕರಿಗೆ ಮಾಹಿತಿ ನೀಡಿ ಹುಡುಕಾಟ ಪ್ರಾರಂಭಿಸಿದಾಗ ಮನೆಯ ಸಮೀಪದ ಕಾಫಿ ತೋಟದಲ್ಲಿ ಕಾಡಾನೆ ದಾಳಿಯಿಂದ ಗಂಭೀರ ಗಾಯಗಳಾಗಿ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿದೆ.

ತಕ್ಷಣ ಸ್ಥಳಕ್ಕೆ ಡಿಸಿಎಫ್ ಜಗನ್ನಾಥ್, ವಲಯ ಅರಣ್ಯ ಅಧಿಕಾರಿ ಶಿವರಾಮ್, ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿ ಸಾಂತ್ವನ ಹೇಳಿದರು. ನಂತರ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು.

7 ವರ್ಷಗಳ ಹಿಂದೆ ಅಣ್ಣನೂ ಸಾವು: ಕಾಡಾನೆ ದಾಳಿಯಿಂದ ಮೃತಪಟ್ಟ ಪುರುಷೋತ್ತಮ ಅವರ ಅಣ್ಣ ಮೋಹನ್‌ದಾಸ್ ಕೂಡ 7 ವರ್ಷಗಳ ಹಿಂದೆ ಕಾಡಾನೆ ದಾಳಿಗೆ ಸಿಲುಕಿ ಅಸುನೀಗಿದ್ದರು. ಕರಡಿಗೋಡು ಸುತ್ತಮುತ್ತಲ ಗ್ರಾಮ ವ್ಯಾಪ್ತಿಗಳಲ್ಲಿ ನಿರಂತರ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದ್ದು ಕಾರ್ಮಿಕರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ನೆಮ್ಮದಿಯಾಗಿ ಸಂಚರಿಸಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕೋಶ ವ್ಯಕ್ತಪಡಿಸಿದ್ದಾರೆ.