ಜಿಲ್ಲೆ

ಆನೆ ದಾಳಿಗೆ ರೈತ ಬಲಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಹೊಸೂರು

ಕೃಷ್ಣಗಿರಿ ಜಿಲ್ಲೆಯ ಗಡಿಯಂಚಿನಲ್ಲಿ ಗಜಪಡೆಗಳ ಹಾವಳಿ ಮುಂದುವರೆದಿದಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಆನೆ ದಾಳಿಗೆ ಅನುಮಂತಪುರಂ ಗ್ರಾಮದ ಮಮತಾ ಎಂಬುವರು ಬಲಿಯಾಗಿದ್ದರು. ಈ ಕಹಿಘಟನೆ ಮಾಸುವ ಮುನ್ನವೇ ಆನೆ ದಾಳಿಗೆ ರೈತರೊಬ್ಬರು ಬಲಿಯಾಗಿರುವ ಪ್ರಕರಣ ರಾಯಕೋಟೆ ಬಳಿ ನಡೆದಿದೆ.

ತಿಮ್ಮಜ್ಜಯಪಲ್ಲಿ ಪಂಚಾಯಿತಿ ಪಡರ್‌ಪಲ್ಲಿ ಗ್ರಾಮದ ಸೇರಿದ ಚಿನ್ನಪ್ಪನ್(62) ಎಂಬುವರು ಆನೆ ತುಳಿತಕ್ಕೆ ಬಲಿಯಾಗಿದ್ದಾರೆ. ಆನೆ ಹಾವಳಿ ತಡೆಗೆ ಅರಣ್ಯ ಇಲಾಖೆ ನಡೆಸುತ್ತಿರುವ ಡ್ರೋನ್ ಕಣ್ಗಾವಲು, ತಡೆಬೇಲಿ ಮತ್ತಿತರ ತಂತ್ರಗಳು ವಿಲವಾಗುತ್ತಿದ್ದು, ಕಾಡಂಚಿನ ಗ್ರಾಮಸ್ಥರು ಆನೆಗಳ ದಾಳಿಯ ಭೀತಿಯಲ್ಲಿಯೇ ದಿನಕಳೆಯುವಂತಾಗಿದೆ.

ತೋಟದ ದಾರಿಯಲ್ಲಿ ದಾಳಿ: ಎಂದಿನಂತೆ  ಮುಂಜಾನೆ ರೈತ ಚಿನ್ನಪ್ಪನ್ ತನ್ನ ತೋಟದ ದಾರಿಯಲ್ಲಿ ಸಾಗುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಆನೆ ಸೊಂಡಲಿನಿಂದ ಬೀಸಿ ಕೆಳಕ್ಕೆ ಎಸೆದಿದೆ. ಸುಮಾರು 10 ಮೀಟರ್‌ವರೆಗೆ ಎಳೆದೊಯ್ದು ಗಾಯಗೊಳಿಸಿ ಬಳಿಕ ಅಲ್ಲಿಂದ ಕಾಲ್ಕಿತ್ತಿದೆ. ಚಿನ್ನಪ್ಪನ್ ಕಿರುಚಾಡಿದ ಶಬ್ದ ಕೇಳಿದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನ ಸ್ಥಳಕ್ಕೆ ದಾವಿಸಿ ಗಾಯಗೊಂಡಿದ್ದ ಚಿನ್ನಪ್ಪನ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾದರು ದುರಾದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದರು ಎನ್ನಲಾಗಿದೆ.

ಅರಣ್ಯಾಧಿಕಾರಿಗಳು ಭೇಟಿ: ಸುದ್ದಿ ತಿಳಿದ ರಾಯಕೋಟಿ ಅರಣ್ಯವಲಯದ ಅಧಿಕಾರಿ ವೆಂಕಟಚಲಂ, ಶರ್ವಣಂ ಹಾಗೂ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದರು. ದಾಳಿ ಮಾಡಿದ ಆನೆಯ ಸುಳಿವು ಪತ್ತೆಗೆ ಮುಂದಾಗಿದ್ದು ಆನೆಯನ್ನು ಕಾಡಿಗಟ್ಟಲು ಕಾರ್ಯಾಚರಣೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ರಾಯಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಬಲಿ ಪಡೆದಿದ್ದ ಕಾಡಾನೆ: ಕೃಷ್ಣಗಿರಿ ಜಿಲ್ಲೆ ಹೊಸೂರು ಸಮೀಪದ ರಾಯಕೋಟ್ಟೈ ಬಳಿ ಕಳೆದ ನಾಲ್ಕೈದು ತಿಂಗಳ ಹಿಂದೆ ಕಾಡಾನೆ ದಾಳಿಗೆ ಅನುಮಂತಪುರಂ ಗ್ರಾಮದ ನಿವಾಸಿ 27 ವರ್ಷದ ಮಮತಾ ಎಂಬುವರು ಬಲಿಯಾಗಿದ್ದರು. ಕೆಲಮಂಗಲಂನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಮತಾ ಎಂದಿನಂತೆ ಸ್ವಗ್ರಾಮದಿಂದ ಕೆಲಸಕ್ಕೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನವೊಂದರಲ್ಲಿ ಡ್ರ್ಾ ಕೇಳಿ ವಾಹನ ಹತ್ತಿದ್ದರು. ಸಿನಿಗರಪೆಲ್ಲಿ ಬಸ್ ನಿಲ್ದಾಣದ ಬಳಿ ಸಂಚರಿಸುತ್ತಿದ್ದ ವೇಳೆ ರಸ್ತೆ ಬದಿಯ ಪೊದೆಯಿಂದ ಏಕಾಏಕಿ ಹೊರಬಂದ ಆನೆ ದಾಳಿ ನಡೆಸಿತ್ತು. ಈ ವೇಳೆ ಮಮತಾ ಸ್ಥಳದಲ್ಲೇ ಮೃತಪಟ್ಟರೆ ದ್ವಿಚಕ್ರವಾಹನ ಸವಾರ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಮೃತ ಮಹಿಳೆಯ ಪತಿ ಹಾಗೂ ಸಂಬಂಧಿಕರು ಸೇರಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಗ್ರಾಮಸ್ಥರು ಶವವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದ್ದರು.

ಗಜಪಡೆಗೆ ಕಬ್ಬಿಣದ ತಡೆಬೇಲಿ ಏನಾಯ್ತು? ಕರ್ನಾಟಕ ತಮಿಳುನಾಡು ಗಡಿ ಭಾಗದ ಕೃಷ್ಣಗಿರಿ ಜಿಲ್ಲೆಯಲ್ಲಿ ಎರಡೂ ರಾಜ್ಯದ ಅರಣ್ಯಾಧಿಕಾರಿಗಳು ಜಂಟಿಯಾಗಿ ಆನೆ ಹಾಗೂ ಇನ್ನಿತರ ಕಾಡುಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕದಂತೆ ತಡೆಯಲು ಪ್ರಾಯೋಗಿಕವಾಗಿ ಕಬ್ಬಿಣದ ತಡೆಬೇಲಿ ನಿರ್ಮಿಸಲಾಗಿದೆ. ಸುಮಾರು 12 ಅಡಿ ಎತ್ತರದ ಕಂಬಗಳ ಜತೆಗೆ 350 ಮೀಟರ್ ಸುತ್ತಳತೆಯಲ್ಲಿ ತಂತಿ ಬೇಲಿ ನಿರ್ಮಾಣ ಮಾಡಲಾಗಿದ್ದು, ಸುಮಾರು 12 ಅಡಿಗಳ ಎತ್ತರದ ಕಂಬಗಳೊಂದಿಗೆ ನಿರ್ಮಿತವಾದ ತಂತಿ ಬೇಲಿಯನ್ನು ಆನೆಗಳ ಮೂಲಕ ತಳ್ಳಲು ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ ಆದರೆ ಇವೆಲ್ಲ ಪ್ರಯೋಗಗಳು ಆನೆಗಳ ಹಾವಳಿ ಹತ್ತಿಕ್ಕುವಲ್ಲಿ ಸಲವಾಗಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ.

ಡ್ರೋನ್ ಕಣ್ಗಾವಲು ಕಥೆ ಏನು? ಕಳೆದ ಮೂರ‌್ನಾಲ್ಕು ತಿಂಗಳ ಹಿಂದೆ ರಾಜ್ಯದಿಂದ ತಮಿಳುನಾಡು ಕಡೆಗೆ ಪ್ರಯಾಣ ಬೆಳೆಸಿರುವ 85ಕ್ಕೂ ಹೆಚ್ಚು ಆನೆಗಳ ಚಲನವಲನಗಳ ಮೇಲೆ ಅರಣ್ಯ ಇಲಾಖೆ ಡ್ರೋನ್ ಕ್ಯಾಮರಾ ಮೂಲಕ ನಿಗಾ ವಹಿಸಿದ್ದು, ಹೊಸೂರು ಕಡೆಗೆ ಸಾಗದಂತೆ ತಡೆಯೊಡ್ಡುವ ಕಾರ್ಯಾಚರಣೆ ರೂಪಿಸಲಾಗಿದೆ.

ರಾಜ್ಯದಿಂದ ವಲಸೆ ಬಂದಿರುವ ಗಜಪಡೆಗಳು ತಮಿಳುನಾಡು ಗಡಿಯಲ್ಲಿ ಬೀಡುಬಿಟ್ಟಿವೆ, ಮೂರ‌್ನಾಲ್ಕು ಗುಂಪುಗಳಾಗಿ ಪ್ರಯಾಣ ಬೆಳೆಸುತ್ತಿರುವ ಆನೆಗಳು ಮೀಸಲು ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಹೂಡಿವೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಡ್ರೋನ್ ಕ್ಯಾಮರಾಗಳ ಮೂಲಕ ಆನೆಗಳ ಚಲನವಲನ ಗಮನಿಸುವ ಕೆಲಸ ಆರಂಭಿಸಿದ್ದಾರೆ. ಆನೆಗಳು ಗಡಿದಾಟಿ ಜಮೀನುಗಳ ಕಡೆ ಬರುವುದನ್ನು ಗಮನಿಸಿ ಅವುಗಳನ್ನು ವಾಪಸ್ ಹಿಮ್ಮೆಟ್ಟಿಸುವ ಪ್ರಯತ್ನ ನಡೆಯುತ್ತಿದೆ. ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ರೈತ ಬಲಿಯಾಗಿರುವುದು ಗ್ರಾಮಸ್ಥರನ್ನು ರೊಚ್ಚಿಗೆಬ್ಬಿಸಿದೆ.