ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಚೌದರಿ ಚರಣಸಿಂಗ್ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಉದ್ಘಾಟಿಸಿದರು.  
ಜಿಲ್ಲೆ

ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲಿ ; ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಸಲಹೆ

ರಾಯಚೂರು: ಏಕ ಬೆಳೆ ಪದ್ಧತಿಗೆ ರೈತರು ಅಂಟಿಕೊಂಡಿರುವುದರಿಂದ ನಷ್ಟಕ್ಕೆ ಗುರಿಯಾಗುತ್ತಿದ್ದು, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ನಿರಂತರ ಆದಾಯ ಗಳಿಸಲು ಮುಂದಾಗುವುದು ಉಳಿದಿರುವ ಒಂದೇ ದಾರಿಯಾಗಿದೆ ಎಂದು ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಹೇಳಿದರು.

ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಚೌದರಿ ಚರಣಸಿಂಗ್ ಭಾವಚಿತ್ರಕ್ಕೆ ಪುಷ್ಪಾಚರಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ರೈತರು ತರಕಾರಿ, ತೋಟಗಾರಿಕೆ, ಕುರಿ, ಕೋಳಿ ಸಾಕಣೆ ಜತೆಗೆ ಬಹು ವಾರ್ಷಿಕ ಬೆಳೆಗಳನ್ನು ಬೆಳೆದಾಗ ಮಾತ್ರ ನಿರಂತರ ಆದಾಯ ಗಳಿಸಲು ಸಾಧ್ಯವಾಗಲಿದೆ ಎಂದರು.

ಕೃಷಿ ವಿಜ್ಞಾನಿಗಳಿಗಿಂತ ರೈತರು ಹೆಚ್ಚು ಚಾಣಾಕ್ಷರಾಗಿದ್ದಾರೆ. ವಿಜ್ಞಾನಿಗಳು ಕೃಷಿ ಸಂಬಂಧಿತ ಒಂದೇ ವಿಷಯದ ಬಗ್ಗೆ ಜ್ಞಾನ ಹೊಂದಿದ್ದರೆ, ರೈತರು ಅನುಭವದ ಮೂಲಕ ಹೆಚ್ಚಿನ ಜ್ಞಾನ ಪಡೆದಿರುತ್ತಾರೆ. ಆದರೆ ಅದನ್ನು ಸಮರ್ಪಕ ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.

ನಂತರ ಜರುಗಿದ ಕಿಸಾನ್ ಗೋಷ್ಠಿ ಹಾಗೂ ನೂತನ ಕೃಷಿ ಕಾಯ್ದೆಗಳ ಕುರಿತು ರೈತರೊಂದಿಗೆ ಚರ್ಚೆ ಹಾಗೂ ಕೃಷಿ ತಜ್ಞರಿಂದ ವಿವಿಧ ವಿಷಯಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಐದು ಜನ ಉತ್ತಮ ಕೃಷಿಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.

ಕೃಷಿ ವಿಜ್ಞಾನಗಳ ವಿವಿ ವಿಸ್ತರಣಾ ನಿರ್ದೇಶಕ ಡಾ.ಡಿ.ಎಂ.ಚಂದರಗಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಸ್.ಯಡಹಳ್ಳಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಡಾ.ದೀಪಾ ಕುಲಕರ್ಣಿ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಶಿವಣ್ಣ, ಎಪಿಎಂಸಿ ನಿರ್ದೇಶಕ ರಂಗನಾಥ ದೇಸಾಯಿ, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ವಿರುಪಾಕ್ಷಪ್ಪ ಕ್ಯಾದಿಗ್ಗೇರಾ ಇದ್ದರು.