ಹಿರಿಯೂರು: ಸಮಗ್ರ ನೀರಾವರಿ ಜತೆ ರೈತ ಸ್ನೇಹಿ ಯೋಜನೆ ಅನುಷ್ಠಾನಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.
ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತೆಂಗು ಬೆಳೆ ಪುನಶ್ಚೇತನ-ನಿರ್ವಹಣೆ ಯೋಜನೆಯಡಿ ರೈತರಿಗೆ ರಸಗೊಬ್ಬರ-ಪರಿಕರ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಬಯಲುಸೀಮೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಪೂರಕ ವಾತಾವರಣ, ಫಲವತ್ತಾದ ಭೂಮಿ ಇರುವುದು ರೈತರಿಗೆ ವರದಾನವಾಗಿದೆ ಎಂದರು.
ಜಿಲ್ಲೆಯಲ್ಲಿ ಹಿರಿಯೂರು-ಹೊಸದುರ್ಗ ತಾಲೂಕಿನಲ್ಲಿ ಅತಿ ಹೆಚ್ಚು ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಭದ್ರೆ, ವಿವಿ ಸಾಗರದ ಒಡಲು ಸೇರಿದ ನಂತರ ಹಿರಿಯೂರಿನಲ್ಲಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ವಿಸ್ತರಣೆಯಾಗಿದೆ. ರೈತರು ನೀರನ್ನು ಮಿತವಾಗಿ ಬಳಸಿ, ತೋಟಗಾರಿಕೆ ಬೆಳೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ವೇಗ ನೀಡಿದ್ದು, ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಧರ್ಮಪುರ ಏತ ನೀರಾವರಿ ಯೋಜನೆ ಯಶಸ್ಸು ಕೃಷಿ ಚಟುವಟಿಕೆಗಳಿಗೆ ವರದಾನವಾಗಿದ್ದು, ಜೆ.ಜಿ.ಹಳ್ಳಿ-ಐಮಂಗಲ ಹೋಬಳಿ ವ್ಯಾಪ್ತಿಯ ಹಳ್ಳಿಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಕ್ರಮ ವಹಿಸಲಾಗುವುದು ಎಂದರು.
ತೋಟಗಾರಿಕೆ ಅಧಿಕಾರಿ ಲೋಕೇಶ್ ಮಾತನಾಡಿ, ತಾಲೂಕಿನಲ್ಲಿ ಅತಿ ಹೆಚ್ಚು ತೋಟಗಾರಿಕೆ-ಅಡಕೆ ಬೆಳೆ ದಾಖಲೆ ಪ್ರಮಾಣದಲ್ಲಿ ವಿಸ್ತರಣೆಯಾಗಿದೆ. ಕೃಷಿಯಲ್ಲಿ ಏಕ ಬೆಳೆ ಪದ್ಧತಿ ಅಪಾಯಕಾರಿಯಾಗಿದ್ದು, ಸಮಗ್ರ ಬೆಳೆ ಪದ್ಧತಿ ರೈತರ ರಕ್ಷಕನಿದ್ದಂತೆ, ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜೆ.ಜಿ.ಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ತೆಂಗು ಪುನಶ್ವೇತನಕ್ಕೆ ನೆರವಾಗಲು ರಸಗೊಬ್ಬರ-ಪರಿಕರ ವಿತರಿಸಲಾಯಿತು.