ಜಿಲ್ಲೆ

ರೈತ ಉತ್ಪಾದಕರ ಕೇಂದ್ರ ಸ್ಥಾಪನೆಯಾಗಲಿ

Chikkamagaluru

ಎನ್.ಆರ್.ಪುರ: ಜಿಲ್ಲೆಯಲ್ಲಿ ರೈತ ಉತ್ಪಾದಕರ ಕೇಂದ್ರ ಸ್ಥಾಪನೆಯಾಗಬೇಕು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಡಾ. ನವೀನ್​ಕುಮಾರ್ ಹೇಳಿದರು.

ಭಾನುವಾರ ಗುರುಭವನದಲ್ಲಿ ಆಯೋಜಿಸಿದ್ದ ರೈತ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನಮ್ಮ ಜಿಲ್ಲೆ ಅಥವಾ ಈ ತಾಲೂಕಿನಲ್ಲಿ ಒಂದು ರೈತ ಉತ್ಪಾದಕರ ಕೇಂದ್ರ ಸ್ಥಾಪನೆಯಾಗಬೇಕು. ಇದಕ್ಕಾಗಿ ಬಿಜೆಪಿ ರೈತ ಮೋರ್ಚಾ ಸಂಘಟಿತರಾಗಬೇಕು. ರೈತ ಉತ್ಪಾದಕರ ಕೇಂದ್ರ ಸ್ಥಾಪನೆಗೆ ಮಾಜಿ ಸಚಿವ ಡಿ.ಎನ್.ಜೀವರಾಜ್ ಸಿಎಂ ಬಿಎಸ್​ವೈಗೆ ಒತ್ತಡ ಹೇರಬೇಕು ಎಂದರು.

ರೈತರಿಗೆ ಮುಕ್ತ ಮಾರುಕಟ್ಟೆ ದೊರೆಯಬೇಕು. ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ರೈತ ಉತ್ಪಾದಕರ ಕೇಂದ್ರ ಸ್ಥಾಪಿಸಬೇಕು. ಮಾರುಕಟ್ಟೆ ವ್ಯವಸ್ಥೆಯಿಂದ ರೈತರು ಸಂಘಟಿತರಾಗಿ, ಸಾಮರ್ಥ್ಯ ವೃದ್ಧಿಯಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲ ರೈತರ ಆದಾಯ ದ್ವಿಗುಣವಾಗಬೇಕು ಎಂದು ಹೇಳಿದ್ದಾರೆ. ಆದಾಯ ದ್ವಿಗುಣವಾಗಬೇಕಾದರೆ ಮೊದಲು ನಾವು ರೈತರ ಖರ್ಚು ಕಡಿಮೆ ಮಾಡಬೇಕು ಎಂದು ಹೇಳಿದರು.

ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ರೈತರ ಸಂಕಷ್ಟಗಳ ಬಗ್ಗೆ ನನಗೆ ಅರಿವಿದೆ. ನಾನೂ ಕೃಷಿ ಕುಟುಂಬದವನೇ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ದೇಶದ ರೈತರ ಉತ್ಪಾದಕ ಕೇಂದ್ರದ ಉಸ್ತುವಾರಿಯಾಗಿದ್ದಾರೆ. ಸಿ.ಟಿ.ರವಿ ಜಿಲ್ಲೆಯ ರೈತರ ನೆರವಿಗೆ ಧಾವಿಸುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು.