ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿ ಅರೆಬೂವನಹಳ್ಳಿ ಗ್ರಾಮದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಮೃತಪಟ್ಟಿದ್ದಾರೆ.
ಗ್ರಾಮದ ಮಂಜುನಾಥ(51) ಮೃತರು. ಇವರು ಬೆಳಗ್ಗೆ ಜಮೀನಿನಲ್ಲಿ ತೆರಳುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಅಸುನೀಗಿದ್ದಾರೆ. ಸೆಸ್ಕ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಯಿತು. ಮೃತ ಮಂಜುನಾಥ್‌ಗೆ ಪತ್ನಿ ಹಾಗೂ ನಾಲ್ವರು ಮಕ್ಕಳಿದ್ದಾರೆ.
‘ಸೆಸ್ಕ್ ನಿರ್ಲಕ್ಷ್ಯದಿಂದ ಜೀವವೊಂದು ಬಲಿಯಾಗಿದೆ. ಮೃತ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಸೆಸ್ಕ್ ಕಚೇರಿ ಎದುರು ಪ್ರತಿಭಟಿಸಲಾಗುವುದು’ ಎಂದು ರೈತ ಸಂಘದ ಮುಖಂಡ ಮುದುಗೆರೆ ರಾಜೇಗೌಡ ಆಗ್ರಹಿಸಿದರು.