ಸರ್ಜಾಪುರದ ಡಾ. ಬಿ.ಆರ್ ಅಂಬೇಡ್ಕರ್ ಆಟದ ಮೈದಾನದಲ್ಲಿ ಶನಿವಾರ ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಸರ್ಜಾಪುರ ಸ್ವೀಫ್ ಸಿಟಿಯ ವಿರುದ್ಧ ಆನೇಕಲ್ ತಾಲೂಕು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಬೃಹತ್ ರೈತ ಸಮಾವೇಶವನ್ನು ರೈತ ಗೀತೆಯೊಂದಿಗೆ ಚಾಲನೆ ನೀಡಲಾಯಿತು. ಪರಿಸರವಾದಿ ಯಲ್ಲಪ್ಪ ರೆಡ್ಡಿ, ಬೆಂಗಳೂರು ನಗರ ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿರಾಜು, ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ.ರಮೇಶ್, ಮುಖಂಡರಾದ ಡಾ.ಮುನಿರೆಡ್ಡಿ ಇತರರು ಇದ್ದರು. 
ಜಿಲ್ಲೆ

ಮುಖ್ಯಮಂತ್ರಿ ಬಳಿಗೆ ಶೀಘ್ರ ರೈತ ನಿಯೋಗ

ಶಾಸಕ ಬಿ.ಶಿವಣ್ಣ ಭರವಸೆ-ಸರ್ಜಾಪುರದಲ್ಲಿ ಭೂಸ್ವಾಧೀನ ವಿರೋಧಿ ರೈತ ಸಮಾವೇಶ

ಸರ್ಜಾಪುರ: ಮುಂದಿನ ದಿನಗಳಲ್ಲಿ ಇಲ್ಲಿನ ರೈತರ ನಿಯೋಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಎಂ.ಬಿ ಪಾಟೀಲ್ ಅವರ ಬಳಿ ಕರೆದೊಯ್ದು ಭೂಸ್ವಾಧೀನ ಕೈಬಿಡುವ ಬಗ್ಗೆ ಮನವರಿಕೆ ಮಾಡಿಕೊಡುವುದರ ಜತೆಗೆ ಸದಾ ರೈತರಪರವಾಗಿ ಹೋರಾಟ ಮಾಡಲು ಬದ್ಧನಾಗಿದ್ದೇನೆ ಎಂದು ಶಾಸಕ ಬಿ.ಶಿವಣ್ಣ ಹೇಳಿದರು.

ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಆಟದ ಮೈದಾನದಲ್ಲಿ ಶನಿವಾರ ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಸರ್ಜಾಪುರ ಸ್ವೀಫ್ ಸಿಟಿಯ ವಿರುದ್ಧ ಆನೇಕಲ್ ತಾಲೂಕು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಬೃಹತ್ ರೈತ ಸಮಾವೇಶದಲ್ಲಿ ಮಾತನಾಡಿದರು.

ಈಗಾಗಲೇ ಇಲ್ಲಿನ ಹೋರಾಟಗಾರರನ್ನು ಸಚಿವ ಎಂ.ಬಿ ಪಾಟೀಲ್ ಅವರೊಂದಿಗೆ ಮಾತನಾಡಿಸಿದ್ದೇನೆ. ಕೃಷಿಗೆ ಯೋಗ್ಯವಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಿಲ್ಲ. ಇದನ್ನು ಸರ್ವೇ ಮಾಡಲು ಈಗಾಗಲೇ ಹೇಳಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಜಾಪುರ ಸ್ವೀಪ್ ಸಿಟಿಯ ಭೂ ಸ್ವಾಧೀನವನ್ನು ಕೈ ಬಿಡುವಂತೆ ಒತ್ತಾಯಿಸಲಾಗಿದೆ. ಇದಕ್ಕೆ ಸಚಿವರು ಈ ಭಾಗದಲ್ಲಿರುವ ತೋಟಗಳು, ರೈತರ ಲವತ್ತಾದ ಭೂಮಿಯನ್ನು ಪಡೆಯುವುದಿಲ್ಲ. ಪ್ರತ್ಯೇಕವಾಗಿ ಸರ್ವೇ ಮಾಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿರುವುದಾಗಿ ತಿಳಿಸಿದರು.

ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಬೆಂಗಳೂರು ನಗರದಲ್ಲಿ ಎಂಟು ಕೈಗಾರಿಕಾ ಪ್ರದೇಶಗಳಿದ್ದು, ಈಗಾಗಲೇ ವಾಯುಮಾಲಿನ್ಯದಿಂದ ಸಾಕಷ್ಟು ಮಲಿನವಾಗಿದೆ. ಇಲ್ಲಿನ ಜನರು ನಿತ್ಯ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಈಗ ಸರ್ಜಾಪುರ ಪಟ್ಟಣವನ್ನು ಸ್ವೀಪ್ ಸಿಟಿಯ ಹೆಸರಲ್ಲಿ ಕೈಗಾರಿಕಾ ಪ್ರದೇಶವನ್ನಾಗಿ ಮಾಡಿ ವಿಷದ ವಾತಾವರಣವಾಗಿ ಬದಲಾಯಿಸಲು ಸಿದ್ಧತೆ ನಡೆಯುತ್ತಿದೆ ಎಂದು ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ಆನೇಕಲ್ ತಾಲೂಕಿನ ಹುಸ್ಕೂರು ಭಾಗದಲ್ಲಿ ೆರಿಪೆರಲ್ ರಿಂಗ್ ರಸ್ತೆ ನಿರ್ಮಿಸಲು ಆ ಭಾಗದ ಪ್ರದೇಶವನ್ನು ಭೂಸ್ವಾಧೀನ ಮಾಡಿ ಇಂದಿಗೆ 19 ವರ್ಷಗಳೇ ಕಳೆದಿವೆ. ಆದರೆ ನಮ್ಮ ಸರ್ಕಾರಗಳು ಇಲ್ಲಿಯವರೆಗೂ ಆರಂಭಗೊಂಡಿಲ್ಲ ಎಂದರು. ವಿಧಾನ ಪರಿಷತ್ ಸದಸ್ಯ ಎಂ.ಗೋಪಿನಾಥ್ ರೆಡ್ಡಿ ಮಾತನಾಡಿದರು, ರೈತ ಸಮಾವೇಶದಲ್ಲಿ ಆನೇಕಲ್ ತಾಲೂಕು ಭೂಸ್ವಾದೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕೆ.ಸಿ ದೇವರಾಜ್, ಉಪಾಧ್ಯಕ್ಷ ನಾಗೇಶ್ ರೆಡ್ಡಿ, ರಮೇಶ್ ರೆಡ್ಡಿ, ಖಜಾಂಚಿ ಮಧು, ಸಂಚಾಲಕ ರಾಮಚಂದ್ರ ರೆಡ್ಡಿ, ಮುಖಂಡರಾದ ಟಿ.ವಿ ಬಾಬು, ಎಂ.ನಾರಾಯಣಸ್ವಾಮಿ, ರಘುಪತಿರೆಡ್ಡಿ, ಎಚ್.ಪಿ ಶಿವಪ್ಪ, ಎಸ್.ವೈ ಶಂಭಯ್ಯ, ಎಸ್.ಎಂ ಶ್ರೀನಿವಾಸ್, ಶ್ರೀನಿವಾಸ್ ಬುಡಗಪ್ಪ, ಸ್ವಾತೇ ಗೌಡ ಇತರರು ಇದ್ದರು.

ಅಧಿವೇಶನದಲ್ಲಿ ಪ್ರಸ್ತಾಪಿಸುವೆ: ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಫಲವತ್ತಾದ ಭೂಮಿ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವುದು ಖಂಡನೀಯ. ಇಲ್ಲಿನ ರೈತರು ಈಗಾಗಲೇ ವಿವಿಧ ಬಗೆಯ ತರಕಾರಿ, ಹಣ್ಣು ಹಾಗೂ ರಾಗಿ, ಭತ್ತ ಸೇರಿದಂತೆ ಮತ್ತಿತರರ ಬೆಳೆಗಳನ್ನು ಬೆಳೆದು ಬೆಂಗಳೂರಿಗೆ ಕಳುಹಿಸುತ್ತಿದ್ದಾರೆ. ಆದರೆ, ಇಂದು ಕೆಐಎಡಿಬಿಯು ಏಕಾಏಕಿ ಯಾವುದೇ ಅಧ್ಯಯನ ಮಾಡದೇ ಅವೈಜ್ಞಾನಿಕವಾಗಿ ಭೂ ಸ್ವಾಧೀನ ಹೊರಡಿಸಿರುವುದು ಶೋಚನೀಯ. ಹಾಗಾಗಿ ಈ ಕೂಡಲೇ ರಾಜ್ಯ ಸರ್ಕಾರವು ಭೂ ಸ್ವಾಧೀನವನ್ನು ಕೈಬಿಡಬೇಕು. ಇದೇ ತಿಂಗಳು 28ರಂದು ನಡೆಯುವ ಲೋಕಸಭಾ ಅಧಿವೇಶನದಲ್ಲಿ ಈ ವಿಚಾರವನ್ನು ಮಂಡಿಸುತ್ತೇನೆ ಮತ್ತು ಸದಾ ರೈತರ ಪರವಾಗಿ ಇರುತ್ತೇನೆ ಎಂದರು.