ಚಿಕ್ಕಮಗಳೂರು: ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆಯನ್ನು ಗ್ರಾಪಂ ಬೆಳೆ ಅಧಿಸೂಚಿಸಿದ್ದ್ದು ರೈತರು ನೋಂದಾಯಿಸಿಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದರು.
ಡಿಸಿ ಕಚೆೇರಿ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತ ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಮುಂಗಾರು ಹಂಗಾಮಿಗೆ ಅಧಿಸೂಚಿತ ಕೃಷಿ 12 ಹಾಗೂ ತೋಟಗಾರಿಕೆ 5 ಬೆಳೆಗಳಿಗೆ ವಿಮೆ ಮಾಡಿಸಲು ಅವಕಾಶವಿದ್ದು ರೈತರು ಯೋಜನೆಯಲ್ಲಿ ಸೇರ್ಪಡೆಗೊಳ್ಳುವುದರಿಂದ ಬೆಳೆ ನಷ್ಟದಿಂದ ತಮಗಾಗುವ ಆರ್ಥಿಕ ನಷ್ಟ ಸರಿದೂಗಿಸಲು ಅನುಕೂಲವಾಗಲಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ವರ್ಷ ರೈತರು ವಿಮೆ ಮಾಡಿಸುವುದು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಈ ಬಾರಿ ಹೀಗಾಗದಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ವಿಮೆ ನೋಂದಣಿ ಮಾಡಿಸುವುದರಿಂದ ರೈತರಿಗೆ ಆಗುವ ಆರ್ಥಿಕ ಲಾಭಗಳ ಅರಿವು ಮೂಡಿಸಬೇಕು. ಹೆಚ್ಚಿನ ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.
ಜಿಲ್ಲೆಗೆ ಮುಂಬರುವ ಮೂರು ವರ್ಷಗಳ ಮುಂಗಾರು ಹಾಗೂ ಹಿಂಗಾರು ಬೆಳೆಗಳ ಹಂಗಾಮಿಗೆ ಬಜಾಜ್ ಅಲಯಾನ್ಸ್ ಸಂಸ್ಥೆಯನ್ನು ವಿಮಾ ಅನುಷ್ಠಾನ ಸಂಸ್ಥೆಯಾಗಿ ಆಯ್ಕೆ ಮಾಡಲಾಗಿದೆ ಎಂದರು. ಬಯಲು ಸೀಮೆ ಪ್ರದೇಶಗಳಾದ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ ಹೆಚ್ಚಿನ ನಷ್ಟ ಉಂಟಾಗುತ್ತಿರುವುದು ಕಂಡು ಬರುತ್ತಿದೆ. ಈ ಭಾಗದಲ್ಲಿ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.