ಜಿಲ್ಲೆ

ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

ಪ್ರಸಿನ್ ಕೆ.ಆರ್

ಬೆಟ್ಟದಪುರ: ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ಸಾಲಕ್ಕೆ ಹೆದರಿ ರೈತನೊಬ್ಬ ತಮ್ಮ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದ ತಿಲಕ್(43) ಮೃತ ರೈತ.

ವ್ಯವಸಾಯಕ್ಕಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಪ್ಪರದಹಳ್ಳಿ ಶಾಖೆಯಲ್ಲಿ ತನ್ನ ಹಾಗೂ ತಂದೆಯ ಹೆಸರಿನಲ್ಲಿ ನಾಲ್ಕು ಲಕ್ಷ ರೂ., ಖಾಸಗಿ ಫೈನಾನ್ಸ್ ನಲ್ಲಿ ಟ್ರಾೃಕ್ಟರ್ ಸಾಲ, ಎಸ್‌ಕೆಡಿಆರ್‌ಪಿ ಸಂಘ ಹಾಗೂ ಇತರೆ ಫೈನಾನ್ಸ್ ಸೇರಿದಂತೆ ಒಟ್ಟು 11.50 ಲಕ್ಷ ರೂ.ಗಳನ್ನು ಸಾಲ ಪಡೆದಿದ್ದರು. ತಾವು ಬೇಸಾಯ ಮಾಡಿದ ಶುಂಠಿ ಹಾಗೂ ತಂಬಾಕು ಬೆಳೆಗಳು ಅತಿವೃಷ್ಠಿಯಿಂದ ಹಾಳಾಗಿ, ಸರಿಯಾಗಿ ಫಸಲು ಬಾರದ ಹಿನ್ನಲೆ ಸಾಲ ತೀರಿಸುವುದು ಕಷ್ಟಸಾಧ್ಯ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಂದೆ ಶಿವಣ್ಣೇಗೌಡ ಹೇಳಿದರು.

ಗುರುವಾರ ಮನೆಯಿಂದ ಹೊರಹೋದವರು ಹಿಂತಿರುಗಿರಲಿಲ್ಲ. ಶನಿವಾರ ಬೆಳಗ್ಗೆ ಜಮೀನಿನ ಬಳಿ ಹೋದಾಗ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸಾಲಕ್ಕೆ ಹೆದರಿ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ಶಿವಣ್ಣೇಗೌಡ ಬೆಟ್ಟದಪುರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಸ್ಥಳ ಮಹಜರು ನಡೆಸಿ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವವನ್ನು ಒಪ್ಪಿಸಿದ್ದಾರೆ.