ಸರಗೂರು: ಸಾಲಬಾಧೆಯಿಂದ ಮನನೊಂದ ರೈತಯೊಬ್ಬರು ಬುಧವಾರ ತುಂಬಸೋಗೆ ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ತಾಲೂಕಿನ ಮುಳ್ಳೂರು ಗ್ರಾಮ ನಿವಾಸಿ, ಹೆಗ್ಗಡಪುರದಲ್ಲಿ ವಾಸವಿದ್ದ ಗೋವಿಂದನಾಯಕ (50) ಮೃತರು.
ಇವರು ಮಂಗಳವಾರ ಬೆಳಗ್ಗೆ ಎಂದಿನಂತೆ ಜಾನುವಾರುಗಳಿಗೆ ಹುಲ್ಲನ್ನು ತರುವುದಾಗಿ ಮನೆಯವರಿಗೆ ಹೇಳಿ ಹೊರಹೋದವರು 11 ಗಂಟೆಯಾದರೂ ಮನೆಗೆ ವಾಪಸಾಗದೆ ನಾಪತ್ತೆಯಾಗಿದ್ದರು. ತಾಲೂಕಿನ ಸಮೀಪದ ತುಂಬಸೋಗೆ ಗ್ರಾಮದಲ್ಲಿ ಕಪಿಲಾ ನದಿಗೆ ನಿರ್ಮಿಸಿರುವ ಸೇತುವೆಯಲ್ಲಿಯೇ ಸ್ಕೂಟರ್ ನಿಲ್ಲಿಸಿ, ಮೇಲಿಂದ ಹೊಳೆಗೆ ಹಾರಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕುಟುಂಬಸ್ಥರ ದೂರಿನ ಮೇರೆಗೆ ಸರಗೂರು ಪೋಲಿಸ್ ಠಾಣೆಯ ಪೊಲೀಸರು, ಎಚ್.ಡಿ.ಕೋಟೆ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಮಂಗಳವಾರ ನದಿಯಲ್ಲಿ ಹುಡುಕಾಟ ನಡೆಸಿದರೂ ಇವರ ಸುಳಿವು ಪತ್ತೆಯಾಗಿರಲಿಲ್ಲ. ಬುಧವಾರ ಬೆಳಗ್ಗೆನಿಂದ ಮಧ್ಯಾಹ್ನ ವರೆಗೂ ಹುಡುಕಾಟ ನಡೆಯಿತು.
ಇಟ್ನ ಗ್ರಾಮದ ಮಾರಮ್ಮನ ದೇವಸ್ಥಾನ ಬಳಿಯ ಹೊಳೆಯಲ್ಲಿ ದೇಹ ತೇಲೆ ಹೋಗುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹ ಹೊರ ತೆಗೆಸಿ, ಸಮುದಾಯ ಸಾರ್ವಜನಿಕರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು.
ಮೃತರು ವ್ಯಸಾಯಕ್ಕಾಗಿ ಬ್ಯಾಂಕ್ ಮತ್ತು ಕೈ ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಸರಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.