ವಿಜಯವಾಣಿ ಸುದ್ದಿಜಾಲ ಧಾರವಾಡ
ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಗ್ರಾಮದ ಫಕ್ಕೀರಪ್ಪ ಬಾಳಪ್ಪ ತಳವಾರ (49) ಮೃತ ರೈತ. 3 ಎಕರೆ ಜಮೀನು ಹೊಂದಿದ್ದ ಈತ, ಕೃಷಿ ಕಾರ್ಯಗಳಿಗಾಗಿ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಖಾಸಗಿಯವರಿಂದ ಸಾಲ ಪಡೆದಿದ್ದ ಎನ್ನಲಾಗಿದೆ. ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ಮನನೊಂದು ಬುಧವಾರ ಸಂಜೆ ಮನೆಯಲ್ಲಿ ವಿಷ ಸೇವಿಸಿದ್ದ. ತೀವ್ರ ಅಸ್ವಸ್ಥಗೊಂಡಿದ್ದ ಫಕ್ಕೀರಪ್ಪನನ್ನು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.