ಕಿಕ್ಕೇರಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಕೊಬ್ಬರಿ ಖರೀದಿಗೆ ಹೆಸರು ನೋಂದಣಿ ಮಾಡಿಕೊಳ್ಳಲು ರೈತರು ಸಾಲುಗಟ್ಟಿ ನಿಂತಿರುವುದು. 
ಜಿಲ್ಲೆ

ನೋಂದಣಿಗಾಗಿ ಮುಗಿಬಿದ್ದ ರೈತಾಪಿ ವರ್ಗ

ಅಭಿನಯ್ ಎಚ್.ಎಂ

ಕಿಕ್ಕೇರಿ: ಕೊಬ್ಬರಿಗೆ ಸರ್ಕಾರದಿಂದ ಬೆಂಬಲ ಬೆಲೆ ಘೋಷಣೆಯಾಗಿದ್ದು, ಇದಕ್ಕಾಗಿ ನೋಂದಣಿ ಮಾಡಿಕೊಳ್ಳಲು ಹೋಬಳಿಯ ವಿವಿಧ ಗ್ರಾಮಗಳ ರೈತರು ಭಾನುವಾರ ತಡರಾತ್ರಿಯಿಂದಲೇ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಜಮಾಯಿಸಿದ್ದರು.

ತಡರಾತ್ರಿಯಿಂದಲೇ ನೂರಾರು ರೈತರು ಎನ್‌ಐಸಿ ತಂತ್ರಾಂಶದಲ್ಲಿ ಫ್ರೂಟ್ಸ್ ಐಡಿ ಮೂಲಕ ನೋಂದಣಿ ಮಾಡಿಕೊಳ್ಳುವ ಸಲುವಾಗಿ ತಿಂಡಿ, ಊಟ ಬಿಟ್ಟು ಕಾದು ಕುಳಿತ್ತಿದ್ದರು. ದಲ್ಲಾಳಿಗಳ ಉಪಟಳದಿಂದ ಮುಕ್ತವಾಗಿ ನೇರ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಕ್ಕೆ ಮಾರಾಟ ಮಾಡಬಹುದು ಎಂಬ ಖಾತ್ರಿಯಲ್ಲಿ ಹೆಸರು ನೋಂದಣಿಗಾಗಿ ಮುಗಿಬಿದ್ದರು.

ರಾತ್ರಿ ಪೂರ್ತಿ ನಿದ್ರೆಗೆಟ್ಟ ರೈತರು ಸರತಿ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನ ಸರತಿ ಬಿಟ್ಟು ಹಲವರು ನೂಕಾಟ ನಡೆಸಿ ನೋಂದಣಿಗೆ ಮುಂದಾದರು. ಪರಿಣಾಮ ಕೆಲಕಾಲ ಗದ್ದಲ ಉಂಟಾಯಿತು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು.

ನೋಂದಣಿಗೆ ಸಾಕಷ್ಟು ಸಮಯವಿದ್ದು ಗದ್ದಲ ಮಾಡಿಕೊಳ್ಳುವುದು ಬೇಡ ಎಂದು ಹಲವು ರೈತ ಮುಖಂಡರು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.