ಜಿಲ್ಲೆ

ಕೃಷಿಕ ಸಮಾಜದ ಕಟ್ಟಡಕ್ಕೆ ಎಲ್ಲಿಂದಾದರೂ ಹಣ ಒದಗಿಸುವೆ

ಹರ್ಷ ನ.ಪುರೋಹಿತ

ಹೊನ್ನಾಳಿ: ನಗರದ ಶಾಂತಿ ಟಾಕೀಸ್ ರಸ್ತೆಯ ಕೃಷಿಕ ಸಮಾಜದ ಕಟ್ಟಡ ಹಳೆಯದಾಗಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ ಯಾವುದಾದರೂ ಮೂಲದಿಂದ ಹಣ ಒದಗಿಸುವೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಭರವಸೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ನಡೆದ ತಾಲೂಕು ಕೃಷಿಕ ಸಮಾಜದ ಸಭೆಯಲ್ಲಿ ನೂತನ ಕಟ್ಟಡದ ಬೇಡಿಕೆಯ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಕೃಷಿಕ ಸಮಾಜದ ಕಟ್ಟಡಕ್ಕೆ ಅಂದಾಜು 40 ಲಕ್ಷ ವೆಚ್ಚದ ನೀಲಿನಕ್ಷೆ ತಯಾರಿಸಿದೆ. ಶೀಘ್ರದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಹಾಯ ಮಾಡುವೆ ಎಂದರು.

ನ್ಯಾಮತಿ ತಾಲೂಕು ಕೃಷಿಕ ಸಮಾಜದ ರಚನೆಯಾಗಬೇಕು ಎಂದು ಅಧ್ಯಕ್ಷ ಬಿ.ಎಚ್. ಜಯಣ್ಣ ಬೇಡಿಕೆ ಇಟ್ಟಿದ್ದಾರೆ.

ಅದರಂತೆ, ನೀವು ನಿಮ್ಮ ಬೈಲಾ ಅನ್ವಯ ಸಂಘ ರಚನೆ ಮಾಡಿಕೊಳ್ಳಿ ಎಂದ ಶಾಸಕರು ಸೂಚಿಸಿದರು.

ಈ ಹಿಂದಿನ ಆಡಳಿತದ ಅವಧಿಯಲ್ಲಿ ಕೆರೆ ತುಂಬಿಸುವ ಕಾಮಗಾರಿಗಳು ನಡೆದಾಗ ಕೇವಲ ಪೈಪ್‌ಲೈನ್ ಕಾಮಗಾರಿ ನಡೆದಿದ್ದು, ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ರೈತರು ದೂರಿದ್ದಾರೆ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇನೆ ಎಂದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಚ್. ಜಯಣ್ಣ ಅವರು ಶಾಸಕರಿಗೆ ಮನವಿ ಸಲ್ಲಿಸಿದರು. ರೈತಸಂಘದ ಮುಖಂಡ ಉಮೇಶ್ ಬೆಳಗುತ್ತಿ, ಬೀರಗೊಂಡನಹಳ್ಳಿ ಶಿವನಗೌಡ ಮಾತನಾಡಿದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಪ್ರತಿಮಾ, ಅಧಿಕಾರಿ ಮಂಜುಳಾ, ರೈತ ಮುಖಂಡರಾದ ಹಿರೇಕಲ್ಮಠ ಬಸವರಾಜಪ್ಪ, ಅರಬಗಟ್ಟೆ ಬಸಪ್ಪ ಮಾಸ್ತರ್ ಭಾಗವಹಿಸಿದ್ದರು.