ಜಿಲ್ಲೆ

ರಸ್ತೆ ಕಾಮಗಾರಿ ಕಳಪೆ, ಅವೈಜ್ಞಾನಿಕ

ಧನಂಜಯ ಎಸ್.ಹಕಾರಿ.

ಮೊಳಕಾಲ್ಮೂರು: ಪಟ್ಟಣದಲ್ಲಿ ನಡೆಯುತ್ತಿರುವ 29 ಕೋಟಿ ರೂ. ವೆಚ್ಚದಲ್ಲಿ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕದಿಂದ ಕೂಡಿದ್ದು, ಕೂಡಲೇ ಸರಿಪಡಿಸದಿದ್ದರೆ ಆ.15ರಂದು ಕಪ್ಪುಪಟ್ಟಿ ಪ್ರದರ್ಶನ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ರೈತಸಂಘ ಎಚ್ಚರಿಸಿದೆ.

ತಾಲೂಕು ಕಚೇರಿ ಬಳಿ ಬುಧವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ರೂಪಾ ಅವರಿಗೆ ಮನವಿ ಸಲ್ಲಿಸಿದ ರೈತಮುಖಂಡರು, ಬಹುದಿನ ಬೇಡಿಕೆ 5 ಕಿಮೀ ಮುಖ್ಯರಸ್ತೆ ವಿಸ್ತರಣೆ ನಡೆಯುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 29 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿ ಸಂಪೂರ್ಣ ಕಳಪೆ ಆಗಿದೆ. ಇದಕ್ಕೆಲ್ಲ ಮೂಲ ಕಾರಣ ಅಧಿಕಾರಿಗಳ ಅಸಡ್ಡೆ ಎಂದು ಆರೋಪಿಸಿದರು.

ಅಗತ್ಯ ಇರುವೆಡೆ ಚರಂಡಿ ನಿರ್ಮಿಸಿಲ್ಲ. ಎರಡು ಬದಿ ನಿರ್ಮಾಣಗೊಂಡಿರುವ ಚರಂಡಿಗಳಲ್ಲಿ ಕಲುಷಿತ ನೀರು, ಕಸ, ಮರಳು ತುಂಬಿದೆ. ಕುಡಿಯುವ ನೀರಿನ ಪೈಪ್‌ಲೈನ್ ಬೇಕಾಬಿಟ್ಟಿ ಮಾಡಲಾಗಿದೆ.

ರಸ್ತೆ ಮಧ್ಯೆ ಅಳವಡಿಸಿರುವ ವಿದ್ಯುತ್ ದೀಪಗಳು ಅಂತರ ಕಡಿಮೆ ಇದ್ದು, ರಾತ್ರಿ ವೇಳೆ ಬೆಳಕಿನ ಅಭಾವ ತಲೆದೋರಲಿದೆ. ಬುನಾದಿ ಇಲ್ಲದೆ ಹಾಕಿರುವ ರಸ್ತೆ ವಿಭಜಕಗಳು ಬೀಳುವ ಸ್ಥಿತಿಯಲ್ಲಿವೆ.

ಕೋಟ್ಯಂತರ ರೂ. ವೆಚ್ಚ ಮಾಡಿಯೂ ಇಂತಹ ಕಾಮಗಾರಿ ಕೈಗೊಂಡಿರುವುದು ಎಷ್ಟು ಸರಿ? ಇದರಲ್ಲಿ ಅವ್ಯವಹಾರ ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಆದ್ದರಿಂದ ತಕ್ಷಣ ವ್ಯವಸ್ಥೆ ಸರಿಪಡಿಸಲು ಮುಂದಾಗದಿದ್ದರೆ ಆ.15ರಂದು ಕಪ್ಪುಪಟ್ಟಿ ಪ್ರದರ್ಶನ ಚಳವಳಿ ನಡೆಸಲಾಗುವುದು ಎಂದು ಹೇಳಿದರು.

ಈ ಹಿಂದೆ ರೈತಸಂಘ, ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸಿದ್ದರಿಂದ ಗುತ್ತಿಗೆದಾರರು, ಇಂಜಿನಿಯರ್ ಸಭೆ ಆಯೋಜಿಸಿದ್ದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.

ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಗೊಳ್ಳುವಂತೆ ಸೂಚಿಸಿದ್ದರು. ಆದರೆ, ಅಂದು ಸೂಚಿಸಿದ ಸಲಹೆಗಳನ್ನು ಗುತ್ತಿಗೆದಾರರು ಪಾಲಿಸಿಲ್ಲ. ಇಷ್ಟೆಲ್ಲ ಸಮಸ್ಯೆಗಳು ಆಗುತ್ತಿದ್ದರು ಮತ್ತೊಂದು ಸಭೆ ಆಯೋಜಿಸುವ ಚಿಂತನೆ ಅಧಿಕಾರಿಗಳು ನಡೆಸಿಲ್ಲ ಎಂದು ದೂರಿದರು.

ರೈತ ಸಂಘದ ರಾಜ್ಯ ಉಪಾದ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ, ತಾಲೂಕಾಧ್ಯಕ್ಷ ರವಿಕುಮಾರ್, ಎಚ್.ಟಿ.ಚಂದ್ರಣ್ಣ, ಮಂಜುನಾಥ, ರಾಜಣ್ಣ, ಕನಕ ಶಿವಮೂರ್ತಿ, ಈರೇಶ್, ಪಾಪಯ್ಯ, ನಿಂಗಣ್ಣ, ವೀರಣ್ಣ ಇತರರಿದ್ದರು.

ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಚರಂಡಿ ಸ್ವಚ್ಛಗೊಳಿಸುವಂತೆ ಸೂಚಿಲಾಗಿದೆ. ಪಾದಚಾರಿ ಓಡಾಟದ ವ್ಯವಸ್ಥೆ ಉತ್ತಮವಾಗಿರಬೇಕು. ನಿರ್ಲಕ್ಷೃಸಿದರೆ ಕಾನೂನು ಕ್ರಮ ಖಚಿತ.ಎಂ.ವಿ.ರೂಪಾ, ತಹಸೀಲ್ದಾರ್