ಮಾಯಕೊಂಡ: ಬೇಸಿಗೆ ಹಂಗಾಮಿನಲ್ಲಿ ರಾಗಿ ಜತೆಗೆ ಸೂರ್ಯಕಾಂತಿ, ಶೇಂಗಾ ಬೆಳೆಯುವ ಮೂಲಕ ಆರ್ಥಿಕ ಸದೃಢತೆ ಸಾಧಿಸುವಂತೆ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಡಿ.ಎಂ. ಶ್ರೀಧರ್ ಮೂರ್ತಿ ರೈತರಿಗೆ ಸಲಹೆ ನೀಡಿದರು.
ಆನಗೋಡು ಹೋಬಳಿಯ ಗುಡಾಳು, ಗುಮ್ಮನೂರು ಗ್ರಾಮಗಳಲ್ಲಿ ಬೆಳೆದಿರುವ ಸೂರ್ಯಕಾಂತಿ ಜಮೀನುಗಳಿಗೆ ಗುರುವಾರ ಭೇಟಿ ನೀಡಿ ಮಾತನಾಡಿದರು.
ಆನಗೋಡು ಹೋಬಳಿ ಮಳೆಯಾಶ್ರಿತ ಪ್ರದೇಶವಾಗಿದ್ದು, ಮುಂಗಾರು ಹಂಗಾಮಿಗೆ ಮೆಕ್ಕೆಜೋಳ ಮತ್ತು ಹಿಂಗಾರು ಹಂಗಾಮಿಗೆ ರಾಗಿ ಬೆಳೆಯಲಾಗುತ್ತದೆ. ಎಣ್ಣೆಕಾಳು ಬೆಳೆಗಳಾದ ಸೂರ್ಯಕಾಂತಿ, ಶೇಂಗಾ ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ತರುತ್ತವೆ. ಹೀಗಾಗಿ ಬೇಸಿಗೆ ಹಂಗಾಮಿನಲ್ಲಿ ಸೂರ್ಯಕಾಂತಿ ಮತ್ತು ಶೇಂಗಾ ಬಿತ್ತನೆ ಸೂಕ್ತ ಎಂದರು.
ಮುಂಗಾರು ಹಂಗಾಮಿನ ಮೆಕ್ಕೆಜೋಳ ಕಟಾವು ಮಾಡಿದ ಕೂಡಲೇ ಸೂರ್ಯಕಾಂತಿ ಬಿತ್ತನೆ ಮಾಡಬೇಕು. ಆಗ ಬೆಳೆ ಬೇಗ ಕಟಾವಿಗೆ ಬರುತ್ತದೆ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುತ್ತದೆ ಎಂದು ಹೇಳಿದರು.
ದ್ವಿದಳ ಧಾನ್ಯಗಳಾದ ತೊಗರಿ, ಆವರೇ ಮತ್ತು ಎಣ್ಣೆಕಾಳು ಬೆಳೆಗಳಾದ ಶೇಂಗಾ, ಸೂರ್ಯಕಾಂತಿಯನ್ನು ಹೆಚ್ಚಾಗಿ ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎಂದರು.
ಆನಗೋಡು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ರೈತರು ಕೃಷಿ ಇಲಾಖೆ ಜತೆಗೆ ನಿರಂತರ ಸಂಪರ್ಕದಲ್ಲಿದ್ದರೆ ಕೃಷಿಗೆ ಬೇಕಾದ ವೈಜ್ಞಾನಿಕ ಮಾಹಿತಿ ಜತೆಗೆ ನೀರಾವರಿಗೆ ಬೇಕಾದ ಸ್ಪಿಂಕ್ಲರ್ ಸೆಟ್ ಸೇರಿ ವಿವಿಧ ಕೃಷಿ ಪರಿಕರಗಳ ಮಾಹಿತಿ ಸಿಗುತ್ತದೆ ಎಂದು ತಿಳಿಸಿದರು.