ರಾಯಚೂರಿನ ಖಾಸಬಾವಿಯಲ್ಲಿ ವಿಸರ್ಜನೆಗಾಗಿ ಗುರುವಾರ ಸಾಲುಗಟ್ಟಿ ನಿಂತಿರುವ ಗಣೇಶ ಮೂರ್ತಿಗಳು. 
ಜಿಲ್ಲೆ

ವಿಘ್ನ ನಿವಾರಕನಿಗೆ ಅದ್ಧೂರಿ ವಿದಾಯ

ರಾಯಚೂರು: ಜಿಲ್ಲೆಯಾದ್ಯಂತ ಗಣೇಶೋತ್ಸವ ನಿಮಿತ್ತ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು 9ನೇ ದಿನವಾದ ಬುಧವಾರ ರಾತ್ರಿಯಿಂದ ಗುರುವಾರ ಮಧ್ಯಾಹ್ನದವರೆಗೆ ಅದ್ಧೂರಿಯಿಂದ ಮೆರವಣಿಗೆ ನಡೆಸುವ ಮೂಲಕ ವಿಸರ್ಜನೆ ನಡೆಸಲಾಯಿತು.
ಸುಮಾರು ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಜಿಲ್ಲೆಯಾದ್ಯಂತ ವಿಸರ್ಜನೆ ಮಾಡಲಾಗಿದ್ದು, ನಗರದಲ್ಲಿ ಸುಮಾರು 150ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಗುರುವಾರ ಮಧ್ಯಾಹ್ನದವರೆಗೆ ಖಾಸಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು.
ನಗರದ ಚಂದ್ರಶೇಖರ ವೌಳೇಶ್ವರ ವೃತ್ತದಲ್ಲಿ ಕೇಂದ್ರೀಯ ಗಜಾನನ ಸಮಿತಿಯಿಂದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿದ್ದ ಸಮಿತಿಗಳ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು. ನಗರದ ವಿವಿಧೆಡೆಯಿಂದ ಮೆರವಣಿಗೆ ಮೂಲಕ ಚಂದ್ರವೌಳೇಶ್ವರ ವೃತ್ತಕ್ಕೆ ಆಗಮಿಸಿ ನಂತರ ಪ್ರಮುಖ ಬೀದಿಗಳ ಮೂಲಕ ಖಾಸಬಾವಿಗೆ ತೆರಳಲಾಯಿತು.
ವಿವಿಧ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ಮೆರವಣಿಗೆ ತಡರಾತ್ರಿಯಾದರೂ ಚಂದ್ರವೌಳೇಶ್ವರ ವೃತ್ತಕ್ಕೆ ಆಗಮಿಸದ ಕಾರಣ ಮೆರವಣಿಗೆ ನೋಡಲು ಆಗಮಿಸಿದ್ದ ಸಾರ್ವಜನಿಕರು ವಾಪಸ್ ಹಿಂತಿರುಗಿದರು.
ಡಿಜೆ ಸದ್ದಿಗೆ ಮೆರವಣಿಗೆ ಉದ್ದಕ್ಕೂ ಹೆಜ್ಜೆ ಹಾಕಿದ ಯುವಕರು ಬೆಳಗಿನ ಜಾವ ಸುಸ್ತಾದಂತೆ ಕಂಡರೂ ನಂತರದಲ್ಲಿ ಜೋಶ್‌ನಿಂದ ಪುನಃ ಕುಣಿದು ಕುಪ್ಪಳಿಸಿದರು. ಬಹುತೇಕ ಗಣೇಶ ಮೂರ್ತಿಗಳು ಮಧ್ಯಾಹ್ನದ 12ರ ನಂತರವೇ ಖಾಸಬಾವಿಗೆ ವಿಸರ್ಜನೆಗೆ ಆಗಮಿಸಿದ್ದವು.
ಗಣೇಶ ವಿಸರ್ಜನೆ ನಿಮಿತ್ತ ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನೇಮಕ ಮಾಡಲಾಗಿತ್ತು. ಕೆಲವೆಡೆ ರಸ್ತೆಯಲ್ಲಿ ಮುಂದೆ ಹೋಗದೆ ಯುವಕರ ಗುಂಪು ಕುಣಿದು ಕುಪ್ಪಳಿಸುತ್ತಿದ್ದರಿಂದ ಮುಂದೆ ಹೋಗುವಂತೆ ಪೊಲೀಸರು ಹೇಳಿದ್ದಕ್ಕೆ ಮಾತಿನ ಚಕಮಕಿ ನಡೆದ ಘಟನೆಗಳು ಜರುಗಿದವು.