ಹಲಗೂರು: ಮೂವತ್ತು ಕಳ್ಳ ಬೇಟೆ ಪ್ರಕರಣಗಳನ್ನು ಪತ್ತೆ ಹಚ್ಚುವ ಜತೆಗೆ ಕಡತ ವಿಲೇವಾರಿ ಮಾಡುವ ಮೂಲಕ ರವಿ ಬುರ್ಜಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗೇಂದ್ರ ಪ್ರಸಾದ್ ಶ್ಲಾಘಿಸಿದರು.
ವರ್ಗಾವಣೆಗೊಂಡ ವಲಯ ಅರಣ್ಯ ಅಧಿಕಾರಿ ರವಿ ಬುರ್ಜಿ ಅವರಿಗೆ ಹಲಗೂರು ಸಮೀಪದ ಭೀಮೇಶ್ವರಿಯಲ್ಲಿರುವ ಕಾವೇರಿ ಪ್ರಕೃತಿ ಶಿಬಿರದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಮಾನವ ಮತ್ತು ವನ್ಯಜೀವಿ ಸಂಘರ್ಷ ತಪ್ಪಿಸಲು ಕಾವೇರಿ ವನ್ಯಜೀವಿ ವಲಯದ ಸುತ್ತಲೂ 5 ಕಿ.ಮೀ. ವ್ಯಾಪ್ತಿಯಲ್ಲಿ ರೈಲು ಕಂಬಿ, ಮತ್ತು 26 ಕಿ.ಮೀ. ಸೋಲಾರ್ ಬೇಲಿ ನಿರ್ಮಿಸಲು ನಿರಂತರವಾಗಿ ಇವರು ಶ್ರಮಿಸಿದ್ದು, ಈ ಭಾಗದ ಜನಮಾನಸದಲ್ಲಿ ಹಸಿರಾಗಿ ಉಳಿಯಲಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿದ ಹಲಗೂರು ವಲಯ ಅರಣ್ಯ ಅಧಿಕಾರಿ ರವಿ ಬುರ್ಜಿ ಮಾತನಾಡಿ, ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಲಹೆ ಮತ್ತು ಸಾರ್ವಜನಿಕರ ಸಹಕಾರದಿಂದ ಹಲವು ಉತ್ತಮ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಉತ್ತಮ ಕೆಲಸ ಮಾಡಲು ಸಹಕಾರ ನೀಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು. ಮುಂದೆ ಕರ್ತವ್ಯ ನಿರ್ವಹಿಸಲಿರುವ ಅಧಿಕಾರಿಗಳಿಗೂ ಸಹಕಾರ ಹೀಗೆ ಇರಲಿ ಎಂದು ಮನವಿ ಮಾಡಿದರು.
ಅರಣ್ಯ ಅಧಿಕಾರಿ ಪ್ರವೀಣ್‌ಕುಮಾರ್ ಮಾತನಾಡಿ, ಹಲಗೂರು ವನ್ಯಜೀವಿ ವಲಯದಲ್ಲಿ ವನ್ಯಜೀವಿಗಳ ಉಪಟಳ ಹೆಚ್ಚಿತ್ತು. ಸಾರ್ವಜನಿಕರಿಂದ ಹೆಚ್ಚು ದೂರು ಬಂದ ಹಿನ್ನೆಲೆಯಲ್ಲಿ ಆನೆ ಕಾರಿಡಾರ್ ಯೋಜನೆಯಲ್ಲಿ ಹಲಗೂರು ವನ್ಯಜೀವಿ ವಲಯದಲ್ಲಿ ಬಹುತೇಕ ರೈಲು ಬ್ಯಾರಿಕೇಡ್ ಹಾಗೂ ಸೋಲಾರ್ ಟೆಂಟಕಲ್ಸ್ ಸಂಪೂರ್ಣವಾಗಿ ಅಳವಡಿಕೆ ಮಾಡಿದ್ದರಿಂದ ರೈತರಿಗೆ ಅನುಕೂಲವಾಗಿದೆ. ಮುತ್ತತ್ತಿ ಕಾವೇರಿ ನದಿ ಅಂಚಿನಲ್ಲಿ ಹಾಗೂ ಅರಣ್ಯ ವಲಯದಲ್ಲಿ ಪ್ಲಾಸ್ಟಿಕ್ ಮುಕ್ತವಾಗಿಸಿ ಮತ್ತು ಡಿಜಿಟಲ್ ತಂತ್ರಜ್ಞಾನ ಸದುಪಯೋಗ ಪಡಿಸಿಕೊಂಡು ಕಳ್ಳ ಬೇಟೆಯಾಡುವವರ ವಿರುದ್ಧ ಪ್ರಕರಣ ದಾಖಲಿಸಿದ್ದರು ಎಂದು ಗುಣಗಾನ ಮಾಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್, ದೇವರಾಜು, ಸಂಪತ್ ಪಟೇಲ್, ನೂತನ ವಲಯ ಅರಣಾಧಿಕಾರಿ ಅನಿಲ್ ಕುಮಾರ್, ಪಿಎಸ್‌ಐ ಬಿ.ಮಹೇಂದ್ರ, ಪ್ರವೀಣ್‌ಕುಮಾರ್, ಸಿದ್ದರಾಮ ಪೂಜಾರಿ ಜಂಗಲ್ ಲಾಡ್ಜ್ ರೆಸಾರ್ಟ್ ವ್ಯವಸ್ಥಾಪಕ ಲೋಕೇಶ್, ವನೋದಯ ಸಂಸ್ಥೆ ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ್, ಸ್ಥಳೀಯ ಮುಖಂಡರಾದ ಎಸ್.ಇ.ಪುಟ್ಟಸ್ವಾಮಿ, ನರೀಪುರ ರಾಜು, ಆನಂದ್ ಸೇರಿದಂತೆ ಹಲವರು ಭಾಗವಹಿಸಿದ್ದರು.