ಮಡಿಕೇರಿ: ಕಳೆದ ಒಂದು ವರ್ಷ ಎಂಟು ತಿಂಗಳ ಕಾಲ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ನಿರ್ಗಮಿತ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರಿಗೆ ಜಿಲ್ಲಾಡಳಿತ ವತಿಯಿಂದ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ, ಬೀಳ್ಕೊಡಲಾಯಿತು.
ನಗರದಲ್ಲಿ ನಡೆದ ಸರಳ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ.ಬಿ.ಸಿ.ಸತೀಶರವರಿಗೆ ಫಲಪುಷ್ಪ, ತಾಂಬೂಲ, ಶಾಲೂ ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವುದು ಒಂದು ಅವಕಾಶ. ಆ ನಿಟ್ಟಿನಲ್ಲಿ ಎಲ್ಲರ ಸಹಕಾರದಿಂದ ಹೆಚ್ಚಿನ ಕೆಲಸ ನಿರ್ವಹಿಸಲು ಸಾಧ್ಯವಾಯಿತು. ಕೊಡಗು ವಿಶೇಷ ಜಿಲ್ಲೆಯಾಗಿದ್ದು, ಇಲ್ಲಿ ಕೆಲಸ ನಿರ್ವಹಿಸುವುದು ವಿಶೇಷ ಅನುಭವ ಪಡೆದಂತೆ ಎಂದರು.
ವಿಧಾನಸಭಾ ಮತ್ತು ವಿಧಾನ ಪರಿಷತ್ ಚುನಾವಣೆ ಜತೆಗೆ ಹಲವು ಅಭಿವೃದ್ಧಿ ಕಾರ್ಯದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಂಡವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಲು ಪ್ರಯತ್ನಿಸಿದ್ದೇನೆ. ಎಲ್ಲರ ಸಹಕಾರದಿಂದ ಸಾರ್ವಜನಿಕ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯ ಎಂದು ಡಾ.ಬಿ.ಸಿ.ಸತೀಶರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಮಾತನಾಡಿ, ಜಿಲ್ಲಾಧಿಕಾರಿರವರು ತಂಡದ ನಾಯಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆಗಳನ್ನು ಸುಲಭವಾಗಿ ಬಗೆ ಹರಿಸುತ್ತಿದ್ದರು. ನಿರ್ಗಮಿತ ಜಿಲ್ಲಾಧಿಕಾರಿರವರ ಜತೆ ಕರ್ತವ್ಯ ನಿರ್ವಹಿಸಿರುವುದು ಒಂದು ಅನುಭವ. ಆ ನಿಟ್ಟಿನಲ್ಲಿ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿ ಕೆಲಸ ಮಾಡಿಸುತ್ತಿದ್ದರು ಎಂದು ಹೇಳಿದರು.
ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ ರಾಜ್ ಮಾತನಾಡಿ, ಡಾ.ಬಿ.ಸಿ.ಸತೀಶರವರು ಸದಾ ಚಟುವಟಿಕೆಯಿಂದ ಕ್ರೀಯಾಶೀಲರಾಗಿ ಸಾರ್ವಜನಿಕರ ಕೆಲಸಗಳಿಗೆ ಸ್ಪಂದಿಸುತ್ತಿದ್ದರು. ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ, ನಿರ್ಗಮಿತ ಜಿಲ್ಲಾಧಿಕಾರಿ ಅವರ ಅವಧಿಯಲ್ಲಿ ಕಾಫಿ ಮೇಳ, ಮಾವು ಮೇಳ, ಜೇನು ಮೇಳ ಆಯೋಜಿಸಿ ಗಮನ ಸೆಳೆದಿದ್ದರು. ಸಾರ್ವಜನಿಕರ ಕುಂದು ಕೊರತೆಗಳನ್ನು ಜಿಲ್ಲಾಡಳಿತ ಭವನದ ಕಾರಿಡಾರ್ನಲ್ಲಿಯೇ ಆಲಿಸಿ ಸಲಹೆ, ಮಾರ್ಗದರ್ಶನ ಮಾಡುತ್ತಿದ್ದರು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಜಿಲ್ಲಾಧಿಕಾರಿ ಕಚೇರಿಯ ಕಾನೂನು ಸಲಹೆಗಾರ ಲೋಕೇಶ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಐಟಿಡಿಪಿ ಅಧಿಕಾರಿ ಎಸ್.ಹೊನ್ನೆಗೌಡ, ಸರ್ಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ, ನಗರಾಭಿವೃದ್ಧಿ ಯೋಜನಾ ಶಾಖೆಯ ಎಇಇ ಹೇಮಂತ್ ಕುಮಾರ್, ತಹಸೀಲ್ದಾರ್ ಪ್ರಕಾಶ್, ಪೌರಾಯುಕ್ತರಾದ ವಿಜಯ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರ, ಭೂ ದಾಖಲೆಗಳ ಉಪ ನಿರ್ದೇಶಕ ಪಿ.ಶ್ರೀನಿವಾಸ ಇತರರು ಮಾತನಾಡಿದರು.
ಕೆಪಿಟಿಸಿಎಲ್ ಎಂಜಿನಿಯರ್ ಮಾದೇಶ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಲಿಂಗರಾಜ ದೊಡ್ಡಮನಿ, ತಹಸೀಲ್ದಾರ್ ಪ್ರಶಾಂತ್, ಶಿರಸ್ತೆದಾರರಾದ ಪ್ರಕಾಶ್, ಸತೀಶ್ ಇತರರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯವರು ಇದ್ದರು.