ಕನಕಗಿರಿಯ ರಾಜಬೀದಿಯಲ್ಲಿನ ಗಜಲಕ್ಷ್ಮೀ ದೇವಸ್ಥಾನದ ಬಳಿ ಕೌಡೇಪಿರ್ ದೇವರುಗಳು ವಿದಾಯಕ್ಕೂ ಮುನ್ನಾ ಒಂದೆಡೆ ಸೇರಿ ಪರಸ್ಪರ ಆಲಂಗಿಸಿಕೊಂಡವು.  
ಜಿಲ್ಲೆ

ಚೋಟಾ ಮೊಹರಂ ಸಂಪನ್ನ, ಕೌಡೇಪೀರ್ ದೇವರುಗಳಿಗೆ ಅದ್ದೂರಿ ವಿದಾಯ

ಕನಕಗಿರಿ: ಚೋಟಾ ಮೊಹರಂ ಎಂದು ಕರೆಯುವ ಕೌಡೇಪೀರ್ ದೇವರುಗಳಿಗೆ ಮಂಗಳವಾರ ಪಟ್ಟಣದಲ್ಲಿ ಅದ್ದೂರಿಯಾಗಿ ವಿದಾಯ ಹೇಳಲಾಯಿತು.

ಮೊಹರಂ ಅಲಾಯಿ ದೇವರುಗಳ ವಿಸರ್ಜನೆ ಬಳಿಕ ಪಟ್ಟಣದ ನಾನಾ ವಾರ್ಡುಗಳ ಮಸೀದಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕೌಡೇಪೀರ್ ದೇವರುಗಳು ಕಳೆದೆರಡು ದಿನಗಳಿಂದ ಭಕ್ತರ ಮನೆಗಳಿಗೆ ಹರಕೆ ತೀರಿಸಿದ್ದವು. ಮಂಗಳವಾರ ಸಂಜೆ ಇಲ್ಲಿನ ರಾಜಬೀದಿಯಲ್ಲಿನ ಗಜಲಕ್ಷ್ಮೀ ದೇವಸ್ಥಾನ ಮುಂಭಾಗದಲ್ಲಿ ಸೇರಿ ಪರಸ್ಪರ ಆಲಂಗಿಸಿಕೊಂಡು ಹಬ್ಬಕ್ಕೆ ವಿದಾಯ ಹೇಳಿ ವಿಸರ್ಜನೆಗಾಗಿ ಹಳ್ಳಕ್ಕೆ ತೆರಳಿದವು.

ಕೌಡೇಪಿರ್ ದೇವರುಗಳನ್ನು ವೀಕ್ಷಿಸಲು ಪಟ್ಟಣದ ನೂರಾರು ಯುವಕರು, ಮಹಿಳೆಯರು ರಾಜಬೀದಿಯಲ್ಲಿ ಸೇರಿದ್ದರು. ರಾಜಬೀದಿಯ ಇಕ್ಕೆಲ, ಮನೆಗಳ ಮಾಳಿಗೆ ಮೇಲೆ ನಿಂತು ಕೌಡೇಪಿರ್ ದೇವರುಗಳ ವಿದಾಯದ ಸಮ್ಮಿಲನವನ್ನು ವೀಕ್ಷಿಸಿ ಸಂಭ್ರಮಿಸಿದರು. ಸರ್ವ ಧರ್ಮದ ಯುವಕರು ಹಲಗೆ ಸದ್ದಿಗೆ ಹೆಜ್ಜೆ ಹಾಕಿ ಮೊಹರಂ ಹಬ್ಬಕ್ಕೆ ತೆರೆ ಎಳೆದರು.