ಜಿಲ್ಲೆ

ಡಾ.ರಾಜೀವ್‌ಗೆ ಬೀಳ್ಕೊಡುಗೆ

ಹನೂರು: ತಾಲೂಕಿನ ಮಾರ್ಟಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸತತ 19 ವರ್ಷಗಳ ಕಾಲ ಸೇವೆ ಸಲ್ಲಿಸಿ ಹನೂರು ಆಸ್ಪತ್ರೆಗೆ ವರ್ಗಾವಣೆಯಾದ ವೈದ್ಯಾಧಿಕಾರಿ ಡಾ.ರಾಜೀವ್ ಅವರನ್ನು ಭಾನುವಾರ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಬೀಳ್ಕೋಡಲಾಯಿತು.

ಗ್ರಾಪಂ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ರಾಮಲಿಂಗಂ ಮಾತನಾಡಿ, ಡಾ.ರಾಜೀವ್ ಅವರು 2006 ರಿಂದಲೂ ಮಾರ್ಟಳ್ಳಿ ಆಸ್ಪತ್ರೆಯಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದು, ಜನರೊಂದಿಗೆ ಉತ್ತಮ ಒಡನಾಟಹೊಂದಿದ್ದ ಸ್ನೇಹಮಯಿ ವೈದ್ಯ. 2018ರಲ್ಲಿ ನಡೆದ ಸುಳವಾಡಿ ವಿಷ ಪ್ರಸಾದ ಸೇವನೆ ದುರಂತ ಪ್ರಕರಣದ ವೇಳೆ ಅಸ್ವಸ್ತಗೊಂಡವರಿಗೆ ಅಗತ್ಯ ಪ್ರಥಮ ಚಿಕಿತ್ಸೆ ನೀಡುವುದರ ಮೂಲಕ ಹಲವು ಜೀವಗಳ ಉಳಿವಿಗೆ ಕಾರಣರಾಗಿದ್ದಾರೆ. ಈ ಬಗ್ಗೆ ಜನ್ನಮನ್ನಣೆ ಗಳಿಸಿದ್ದಾರೆ. ಇದೀಗ ಹನೂರು ಸರ್ಕಾರಿ ಆಸ್ಪತ್ರೆಗೆ ವರ್ಗಾವಣೆಯಾಗಿದ್ದಾರೆ. ಹಾಗಾಗಿ ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಸನ್ಮಾನಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಇಗ್ನೇಶಿ ಮುತ್ತು, ಉಪಾಧ್ಯಕ್ಷೆ ನದಿಯಾ ರಾಮಲಿಂಗಂ, ಗ್ರಾಪಂ ಸದಸ್ಯರಾದ ಬಾಲಯ್ಯ, ಆರುಸ್ವಾಮಿ, ಸುರೇಶ್, ಅಂತೋಣಿಯಮ್ಮ, ಪುಷ್ಪಾ, ಪೌಲ್‌ರಾಜ್ ಮಾಜಿ ಸದಸ್ಯರಾದ ಜಪಮಾಲೆ, ಸಮನ್ಸ್, ತಾಪಂ ಮಾಜಿ ಸದಸ್ಯ ಮಣಿನಾಯ್ಕ ಇತರರು ಇದ್ದರು.