ಜಿಲ್ಲೆ

ಕೌಶಲ ಬಳಸಿ ಸ್ವತಂತ್ರ ಜೀವನ ರೂಪಿಸಿಕೊಳ್ಳಿ: ಗ್ರಂಥಪಾಲಕ ವೈ.ಎಚ್.ಜನಾರ್ದನ್ ಕಿವಿಮಾತು

ಕೆ.ಎನ್.ರಾಘವೇಂದ್ರ

ಮಂಡ್ಯ: ಮೂರು ವರ್ಷದ ಪದವಿ ಮುಗಿಸಿದ ನಂತರ ವಿದ್ಯಾರ್ಥಿಗಳು ಪ್ರಮಾಣ ಪತ್ರವನ್ನು ಇಟ್ಟುಕೊಂಡು ಮನೆಯಲ್ಲಿ ಕೂರಬಾರದು. ಬದಲಿಗೆ ಕಲಿತಿರುವ ಕೌಶಲವನ್ನು ಮುಂದಿನ ದಿನದಲ್ಲಿ ಬಳಸಿಕೊಂಡು ಸ್ವತಂತ್ರ ಜೀವನ ರೂಪಿಸಿಕೊಳ್ಳಿ ಎಂದು ಸರ್ಕಾರಿ ಮಹಿಳಾ ಕಾಲೇಜಿನ ಗ್ರಂಥಪಾಲಕ ವೈ.ಎಚ್.ಜನಾರ್ದನ್ ಕಿವಿಮಾತು ಹೇಳಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹ ವಿಭಾಗದಿಂದ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಮೂಹ ಮಾಧ್ಯಮ ತುಂಬಾ ದೊಡ್ಡ ಉದ್ಯಮವಾಗಿದೆ. ಇಂತಹ ಉದ್ಯಮದಲ್ಲಿ ಕಾರ್ಯನಿರ್ವಹಿಸಲು ನೀವೆಲ್ಲರೂ ಬೇರೆ ಬೇರೆ ಕೌಶಲವನ್ನು ಕರಗತ ಮಾಡಿಕೊಳ್ಳಬೇಕು. ಆಗ ಮಾತ್ರ ನಿಮಗೆ ಮಾಧ್ಯಮ ಸದಾ ತೆರೆದಿರುತ್ತದೆ. ಇಲ್ಲಿ ಕಲಿತಿರುವ ಪ್ರತಿ ವಿದ್ಯಾರ್ಥಿಯು ರಾಷ್ಟ್ರೀಯ, ರಾಜ್ಯ ಮಾಧ್ಯಮಗಳಲ್ಲಿ ಕೆಲಸ ಮಾಡಬೇಕು. ಆಗ ಮಾತ್ರ ನೀವು ಓದಿರುವ ವಿಷಯಕ್ಕೆ ಗೌರವ ಕೊಟ್ಟಂತಾಗುತ್ತದೆ. ನಿಮ್ಮ ಗ್ರಾಮದ ಸಮಸ್ಯೆಗಳ ವರದಿಯನ್ನು ಜಗತ್ತಿಗೆ ತೋರಿಸಿ ಅದರ ಅಭಿವೃದ್ಧಿ ಮಾಡುವಂತಹ ವರದಿಗಾರರಾಗಬೇಕು ಎಂದು ಹಾರೈಸಿದರು.

ಇಂದು ಜಗತ್ತು ಸ್ಪರ್ಧಾತ್ಮಕವಾಗಿದ್ದು, ಅದರಲ್ಲಿ ಮುಂದೆ ಬರಬೇಕಾದರೆ ನೀವು ಕಠಿಣ ಪರಿಶ್ರಮವನ್ನು ಈ ಪದವಿ ಹಂತದಲ್ಲಿ ಮಾಡಬೇಕು. ಆಗ ಮಾತ್ರ ನೀವು ಸರ್ಕಾರಿ ಹುದ್ದೆಯನ್ನು ಪಡೆಯಲು ಯಶಸ್ವಿ ಗಳಿಸುತ್ತೀರಾ. ಕಾಲೇಜಿನಲ್ಲಿ ಉತ್ತಮವಾದ ಗ್ರಂಥಾಲಯ ಪರಿಣಿತ ಪ್ರಾಧ್ಯಾಪಕರಿದ್ದು ಅವರ ಮಾರ್ಗದರ್ಶನವನ್ನು ಸೂಕ್ತವಾಗಿ ಬಳಸಿಕೊಳ್ಳಿ ಎಂದು ತಿಳಿಸಿದರು

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಚ್.ಎಸ್.ಶಿವರಾಜು ಮಾತನಾಡಿ, ಮೂರು ವರ್ಷದ ಪದವಿ ನಿಮ್ಮ ನೆನಪಿನ ಬುಟ್ಟಿಯಲ್ಲಿ ಸದಾ ಉಳಿಯಬೇಕು. ಬದುಕಿನ ಭವಿಷ್ಯದ ಯಶಸ್ಸಿಗೆ ಪದವಿಯಲ್ಲಿ ಪರಿಶ್ರಮ ಅಗತ್ಯ. ಪ್ರತಿ ವಿದ್ಯಾರ್ಥಿಯು ಈ ದಿನಗಳನ್ನು ಬದುಕಿನ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು. ಇಲ್ಲಿ ಓದುವಂತಹ ಬಹುತೇಕ ಮಕ್ಕಳು ಗ್ರಾಮೀಣ ಭಾಗದವರಾಗಿದ್ದು, ಅಲ್ಲಿನ ಸಮಸ್ಯೆ, ಸಾಮರಸ್ಯ ಸಹಬಾಳ್ವೆ, ಸಂಸ್ಕೃತಿಗೆಯನ್ನು ಹೊರ ಜಗತ್ತಿಗೆ ತೋರಿಸುವಂತ ವರದಿಗಾರರಾಗಬೇಕು. ಆಗ ಮಾತ್ರ ಈ ಪತ್ರಿಕೋದ್ಯಮ ಪದವಿ ಅಧ್ಯಯನ ಮಾಡಿರುವುದು ಸಾರ್ಥಕವಾಗುತ್ತದೆ. ಬೀಳ್ಕೊಡುಗೆ ಸಮಾರಂಭ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಭಾವನಾತ್ಮಕ ನೆನಪುಗಳ ಹೊತ್ತುಕೊಂಡು ಹೋಗುವ ಸುಂದರ ಸಂದರ್ಭ. ಈ ನೆನಪುಗಳು ಸದಾ ನಿಮ್ಮ ಮನದಲ್ಲಿ ಮನೆ ಮಾಡಿರಲಿ. ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

ಪ್ರಾಂಶುಪಾಲ ಡಾ.ಕೆ.ಗುರುರಾಜಪ್ರಭು ಮಾತನಾಡಿ, ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲ ಸಕಲ ಸೌಲಭ್ಯಗಳನ್ನು ನೀಡುವಲ್ಲಿ ಕಾಲೇಜು ಸದಾ ಸಿದ್ಧವಾಗಿರುತ್ತದೆ. ಸೌಲಭ್ಯವನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ಮಾಡಿಕೊಳ್ಳಬೇಕು. ಆಗ ಮಾತ್ರ ಕಾಲೇಜಿಗೂ ಒಂದು ಗೌರವ. ಇತ್ತೀಚಿನ ವಿದ್ಯಾರ್ಥಿಗಳು ಓದುವುದಕ್ಕಿಂತ ಮೊಬೈಲ್‌ನಲ್ಲಿ ತೊಡಗಿರುವುದು ಬೇಸರದ ಸಂಗತಿ. ಮೊಬೈಲ್‌ನಲ್ಲಿ ಸ್ಪರ್ಧಾತ್ಮಕ ವಿಷಯಗಳನ್ನು ಅಭ್ಯಾಸ ಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಪತ್ರಿಕೋದ್ಯಮ ಒಂದು ಅತ್ಯುತ್ತಮ ಶಕ್ತಿಶಾಲಿ ಸಾಧನವಾಗಿದ್ದು, ಅದನ್ನು ನೀವು ಉತ್ತಮವಾಗಿ ಬಳಸಿಕೊಂಡು ಸಮಾಜವನ್ನು ತಿದ್ದುವಂತಹ ಉತ್ತಮ ಪತ್ರಕರ್ತರಾಗಿ ಎಂದು ಹಾರೈಸಿದರು.

ರಾಜ್ಯಶಾಸ್ತ್ರದ ಸಹ ಪ್ರಾಧ್ಯಾಪಕ ಎಚ್.ಆರ್.ಶೇಖರ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ರಾಜೇಂದ್ರಸಿಂಗ್‌ಬಾಬು ಉಪಸ್ಥಿತರಿದ್ದರು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿದರು.