ಜಿಲ್ಲೆ

ಜೀವನದ ಮೌಲ್ಯ ಬೆಳೆಸುವ ಶಿಕ್ಷಣ: ಎಸ್‌ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಜೀವನದ ಮೌಲ್ಯಗಳನ್ನು ತಿಳಿಸುವುದೇ ನಿಜವಾದ ಶಿಕ್ಷಣ ಎಂದು ಎಸ್‌ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.

ನಗರದ ಎಸ್.ಬಿ ಸಮುದಾಯ ಭವನದಲ್ಲಿ ಎಸ್‌ಬಿ ಎಜುಕೇಷನ್ ಟ್ರಸ್ಟ್, ಮಾಂಡವ್ಯ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳು ಸ್ನೇಹ ಗೌರವದಿಂದ ವರ್ತಿಸುವಂತಹ ಜ್ಞಾನ ಪಡೆಯುವುದು ಶಿಕ್ಷಣ. ಪ್ರತಿಯೊಬ್ಬರಲ್ಲೂ ಉದ್ಯಮಶೀಲರನ್ನಾಗಿ ಮಾಡುವುದೇ ಶಿಕ್ಷಣ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ಮನುಷ್ಯನ ಚಾರಿತ್ರ್ಯವನ್ನು ಬೆಳೆಸುವ ಜ್ಞಾನವಾಗಬೇಕು. ಜೀವನದ ರಹಸ್ಯಗಳನ್ನು ತಿಳಿದುಕೊಂಡು ಸಾಕ್ಷಾತ್ಕಾರ ಮಾಡಿಕೊಳ್ಳುವುದು. ಕ್ಷಣವೆಂದರೆ ಒಳ್ಳೆಯ ನಡೆ-ನುಡಿಗಳನ್ನು ಹೇಳಿಕೊಡುವಂತಹ ಒಂದು ಕಲೆ. ಮನೆಯಲ್ಲಿರುವ ಮಕ್ಕಳು ಶಾಲೆಗೆ ಹೋಗುವಾಗ ಎಲ್ಲವನ್ನು ಕಲಿಯುತ್ತಾರೆ. ಇದು ಶಿಕ್ಷಣದ ಪ್ರಭಾವವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಎಸ್‌ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಉದ್ಘಾಟಿಸಿದರು. ಜಿಲ್ಲಾ ವಾಣಿಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಬಿ.ಲಿಂಗೇಗೌಡ, ಮದ್ದೂರಿನ ಕೇಂಬ್ರಿಡ್ಜ್ ಕಾನ್ವೆಂಟ್‌ನ ಮುಖ್ಯ ಶಿಕ್ಷಕ ಎಚ್.ಬಿ.ರವಿನಾರಾಯಣ್, ಯೋಗ ಶಿಕ್ಷಕಿ ಸಾವಿತ್ರಿ ಲಕ್ಷ್ಮಣ್, ಮಾಂಡವ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಭವಾನಿ ಶಂಕರ್, ಮಾಂಡವ್ಯ ಇಂಟಿಗ್ರೇಟೆಡ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ್, ಶೈಕ್ಷಣಿಕ ಪಾಲುದಾರರಾದ ಚನ್ನೇಶ್, ಎಂ.ಎಸ್.ಅರ್ಚನಾ, ಡಾ.ಮೋಹನ್, ಎಂ.ಬಿ.ಅವಿನಾಶ್, ಡಿ.ಎಸ್.ರಾಘವೇಂದ್ರ, ಪ್ರೌಢಶಾಲೆ ಮುಖ್ಯಶಿಕ್ಷಕ ಮಹದೇವಯ್ಯ ಇತರರಿದ್ದರು.

2023-24ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.