ಜಿಲ್ಲೆ

ಅತ್ಯುತ್ತಮ ಸೇವೆಯಿಂದ ನಿವೃತ್ತಿ ಬಳಿಕ ಗೌರವ : ಇಒ ಭವಾನಿಶಂಕರ್ ಹೇಳಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಸರ್ಕಾರಿ ಸೇವೆಯಲ್ಲಿ ನಾವು ಯಾವ ರೀತಿ ಜನಪರವಾಗಿ ತೊಡಗಿಸಿಕೊಳ್ಳುತ್ತೇವೋ ಅಷ್ಟೇ ಜನ ನಮ್ಮ ಸೇವೆಯನ್ನು ಗೌರವಿಸುತ್ತಾರೆ. ಜತೆಗೆ ನಮ್ಮ ತೃಪ್ತಿದಾಯಕ ಸೇವೆಯ ನಿಜ ಫಲಿತಾಂಶ ನಾವು ನಿವೃತ್ತರಾದ ಬಳಿಕ ಜನ ಕೊಡುವ ಗೌರವದಿಂದ ವ್ಯಕ್ತವಾಗುತ್ತದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಹೇಳಿದರು.

ತಾಲೂಕು ಅಂಗವಿಕಲರ, ಹಿರಿಯ ನಾಗರಿಕರ ನೋಡೆಲ್ ಅಧಿಕಾರಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿವೃತ್ತ ಹಿರಿಯ ಮೇಲ್ವಿಚಾರಕಿ ರತ್ನಾವತಿ ಪಿ.ಲೋಕೇಶ್ ಅವರಿಗೆ ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಬಳಗದಿಂದ ತಾ ಪಂ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂಗವಿಕಲರ ತಾಲೂಕು ಸಂಯೋಜಕ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ಮಾತನಾಡಿ, ರತ್ನಾವತಿ ನಮಗೆಲ್ಲರಿಗೂ ತಾಯಿಯ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಇಲಾಖಾ ವರದಿ ತಯಾರಿ, ಸೇವಾ ವಿಶಾಲತೆ ಬಗ್ಗೆ ತಿಳಿಹೇಳಿ ಹೊಸ ವಿಆರ್‌ಡಬ್ಲುೃಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದು, ಅವರ ಸೇವೆ ಅನನ್ಯ ಎಂದರು.

ನೋಡೆಲ್ ಅಧಿಕಾರಿಯಾಗಿ ನಿಯುಕ್ತಿಗೊಂಡಿರುವ ವಾಣಿಶ್ರೀ ಪ್ರವೀಣ್ ಮಾತನಾಡಿದರು. ಉಡುಪಿ ದ.ಕ. ಜಿಲ್ಲಾ ವಿಕಲ ಚೇತನರ ಸಂಘ ಆಜೀವ ಸದಸ್ಯ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಙ ಮುಂಡಾಜೆ ಅಭಿನಂದನಾ ಮಾತುಗಳನ್ನಾಡಿದರು. ವಿಆರ್‌ಡಬ್ಲುೃ ಎಂ.ಜೆ. ಜೋಸೆಫ್ ಇಂದಬೆಟ್ಟು, ಫೌಝಿಯಾ ನಪಂ ಅನಿಸಿಕೆ ವ್ಯಕ್ತಪಡಿಸಿದರು. ರತ್ನಾವತಿ ಪಿ.ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಗೌರವ ಸ್ವೀಕರಿಸಿ ಮಾತನಾಡಿ, ನಾನು ನಿವೃತ್ತನಾದರೂ ಪಕ್ಕದ ನಡ ಗ್ರಾಮದಲ್ಲೇ ಇದ್ದು ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ಅಂಗವಿಕಲರಿಗೆ ಭರವಸೆ ತುಂಬಿದರು. ಈರಣ್ಣ ಬೆಳಾಲು ಸ್ವಾಗತಿಸಿದರು.