ಜಿಲ್ಲೆ

ಒಂದೊಂದು ಬಸ್‌ನಲ್ಲಿ ಒಂದೊಂದು ದರ!, ಇದು ಬಿಎಂಟಿಸಿ ಕಮಾಲ್, ಪ್ರಯಾಣಿಕರು, ಕಂಡಕ್ಟರ್ ನಡುವೆ ವಾಗ್ವಾದ ಸಾಮಾನ್ಯ

Bengaluru Rural

ವಿಜಯಪುರ: ಜಿಲ್ಲಾಡಳಿತ ಭವನಕ್ಕೆ ಸಂಚರಿಸುವ ಬಿಎಂಟಿಸಿ ಬಸ್‌ಗಳ ಪೈಕಿ ಒಂದೊಂದು ಬಸ್‌ನಲ್ಲೂ ಒಂದೊಂದು ದರ ವಸೂಲಿ ಮಾಡಲಾಗುತ್ತಿದೆ.

ದೇವನಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕೋಡಿಮಂಚೇನಹಳ್ಳಿಗೆ 5 ರೂ. ದರ ಇದೆ. ಕೊಯಿರಾ ತೆರಳುವ ಬಿಎಂಟಿಸಿ ಬಸ್‌ನಲ್ಲೂ ಇಲ್ಲಿಗೆ 5 ರೂ. ದರ ಇದೆ. ಆದರೆ, ಜಿಲ್ಲಾಧಿಕಾರಿಗಳ ಕಚೇರಿಗೆ ಸಂಚರಿಸುವ ಬಿಎಂಟಿಸಿಯ ಹೊಸ ಬಸ್‌ನಲ್ಲಿ ಇದೇ ಸ್ಥಳಕ್ಕೆ 10 ರೂ. ಪಡೆಯಲಾಗುತ್ತಿದೆ.

ಬೊಮ್ಮವಾರಕ್ಕೆ ಕೆಎಸ್‌ಆರ್‌ಟಿಸಿ ಹಾಗೂ ಕೊಯಿರಾದಿಂದ ಸಂಚರಿಸುವ ಬಿಎಂಟಿಸಿ ಬಸ್‌ಗಳಲ್ಲಿ 10 ರೂ. ದರ ಇದ್ದರೆ, ಬಿಎಂಟಿಸಿ ಹೊಸ ಬಸ್‌ನಲ್ಲಿ ಇದೇ ಅಂತರಕ್ಕೆ 15 ರೂ. ಶುಲ್ಕ ಪಡೆಯಲಾಗುತ್ತದೆ.

ಪಾಂಡವಪುರಕ್ಕೆ ಕೆಎಸ್‌ಆರ್‌ಟಿಸಿ ಹಾಗೂ ಕೊಯಿರಾಗೆ ತೆರಳುವ ಬಿಎಂಟಿಸಿ ಬಸ್‌ನಲ್ಲಿ 10 ರೂ. ಶುಲ್ಕವಿದ್ದರೆ, ಹೊಸಬಸ್‌ನಲ್ಲಿ 20 ರೂ. ಶುಲ್ಕ ಪಡೆಯಲಾಗುತ್ತದೆ. ಈ ಬಸ್‌ನಲ್ಲಿ ಕೇವಲ 5 ಕಿ.ಮೀ. ಅಂತರದಲ್ಲಿ 4 ಸ್ಟೇಜ್‌ಗಳನ್ನು ಮಾಡಿರುವುದು ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲಿಂದ ಸುಮಾರು 10 ಕಿ.ಮೀ ದೂರದ ವಿಶ್ವನಾಥಪುರ ಮತ್ತು ಕೊಯಿರಾಗೂ 20 ರೂ. ದರ ಆಗಿರುತ್ತದೆ.

ಅವೈಜ್ಞಾನಿಕ ಸ್ಟೇಜ್‌ಗಳ ನಿರ್ಮಾಣ: ದೇವನಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 4 ಸ್ಟೇಜ್‌ಗಳಾದರೆ, ಹೊಸ ಬಿಎಂಟಿಸಿ ಬಸ್‌ಗಳಲ್ಲಿ 12 ಸ್ಟೇಜ್‌ಗಳನ್ನು ಮಾಡಲಾಗಿದೆ. ಸಾಮಾನ್ಯವಾಗಿ ಬಿಎಂಟಿಸಿ ಬಸ್‌ಗಳಲ್ಲಿ 3 ಕಿ.ಮೀಗೆ 1 ಸ್ಟೇಜ್ ಎಂದು ನಿಗದಿಯಾಗಿದೆ. ಆದರೆ ದೊಡ್ಡಬಳ್ಳಾಪುರ ರೂಟ್‌ನ ಬಿಎಂಟಿಸಿ ಬಸ್‌ಗಳಲ್ಲಿ ದೇವನಹಳ್ಳಿ ಪಟ್ಟಣದಿಂದ ಬೈಪಾಸ್‌ನ ಪಾರ್ವತಿಪುರಕ್ಕೆ ಒಂದು ಸ್ಟೇಜ್, ಕೋಡಿಮಂಚೇನಹಳ್ಳಿಗೆ ಎರಡನೇ ಸ್ಟೇಜ್, ಬೊಮ್ಮವಾರಕ್ಕೆ ಮೂರನೇ ಸ್ಟೇಜ್ ನಿಗದಿಪಡಿಸಲಾಗಿದೆ. ದೊಡ್ಡಬಳ್ಳಾಪುರದ ಬಳಿ ರಘುನಾಥಪುರದಿಂದ ಎಲ್ ಆ್ಯಂಡ್ ಟಿಗೆ 1 ಕಿ.ಮೀಗಿಂತ ಕಡಿಮೆ ಅಂತರವಿದೆ. ಇದಕ್ಕೆ ಒಂದು ಸ್ಟೇಜ್ ಎಂದು ಪರಿಗಣಿಸಲಾಗುತ್ತದೆ. ಈ ರೀತಿ ಅವೈಜ್ಞಾನಿಕವಾಗಿ ಅರ್ಧ, ಮುಕ್ಕಾಲು ಕಿಮೀಗೂ ಒಂದೊಂದು ಸ್ಟೇಜ್‌ಗಳನ್ನು ನಿರ್ಮಿಸಿ ಹಣ ಸುಲಿಗೆ ಮಾಡಲಾಗುತ್ತಿದೆ ಎಂದು ಜನರು ದೂರಿದ್ದಾರೆ. ಈ ಬಗ್ಗೆ ಬಿಎಂಟಿಸಿಗೆ ಸಾಕಷ್ಟು ದೂರುಗಳನ್ನು ನೀಡಿದರೂ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರು ಮತ್ತು ಕಂಡಕ್ಟರ್ ನಡುವೆ ದಿನವೂ ಜಟಾಪಟಿ ಸಾಮಾನ್ಯವಾಗಿದೆ.

ಕೋಟ್

ಸ್ಟೇಜ್ ಸರ್ವೇ ಮಾಡುವಾಗ ವ್ಯತ್ಯಯಗಳು ಉಂಟಾಗಿವೆ. ಬೇರೆ, ಬೇರೆ ಸ್ಟೇಜ್ ಮತ್ತು ದರ ನಿಗದಿಯಾಗಿದ್ದು, ಬಹಳಷ್ಟು ಪ್ರಯಾಣಿಕರು ಹೆಚ್ಚುವರಿ ಟಿಕೆಟ್‌ನ ಬಸ್‌ಗಳಿಗೆ ಹತ್ತುತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಇದುವರೆಗೂ ಕ್ರಮ ತೆಗೆದುಕೊಳ್ಳದ ಕಾರಣ ಪರಿಸ್ಥಿತಿ ಹೀಗಾಗಿದೆ.

ಸಿ.ಕೆ.ನಾರಾಯಣಸ್ವಾಮಿ, ಬಿಎಂಟಿಸಿ ಸಂಚಾರ ನಿಯಂತ್ರಣಾಧಿಕಾರಿ, ದೇವನಹಳ್ಳಿ