ಜಿಲ್ಲೆ

ಎಫ್‍ಎ ಕ್ಯೂ ಗುಣಮಟ್ಟದ ಜೋಳ ಖರೀದಿಗೆ ಬೆಲೆ ನಿಗದಿ  ಮೇ 31 ರವರೆಗೆ ನೋಂದಣಿ ಕಾರ್ಯ

ಗದಗ:  ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಜೋಳ ಉತ್ಪನ್ನವನ್ನು ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದ್ದು ಮೇ 31 ರವರೆಗೆ ನೊಂದಣಿ ಕಾರ್ಯ  ಕೈಗೊಳ್ಳಲಾಗುವುದು.  ನೊಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾ ಭವನದಲ್ಲಿ  ಗುರುವಾರದಂದು  2023-24 ನೇ ಸಾಲಿನ ಹಿಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜೋಳ ಕೃಷಿ ಹುಟ್ಟುವಳಿ ಖರೀದಿಸುವ  ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಮಾನದಂಡಗಳನ್ವಯ ಎಫ್.ಎ.ಕ್ಯೂ ಗುಣಮಟ್ಟವನ್ನು ದೃಢೀಕರಿಸಲು  ಕ್ರಮ ವಹಿಸಬೇಕು. ಖರೀದಿ ಏಜ್ಸನಿಯವರು ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು.  ಪ್ರತಿ ಖರೀದಿ ಕೇಂದ್ರಕ್ಕೆ  ಗ್ರೇಡರ್‍ಗಳನ್ನು ನೇಮಿಸಬೇಕು.  ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರಗೆ 20 ಕ್ವಿಂಟಾಲ್‍ನಂತೆ  ರೈತರಿಂದ ಅವರು ಹೊಂದಿರುವ ಜಮೀನಿಗೆ ಅನುಗುಣವಾಗಿ ಎಫ್.ಐ.ಡಿ. ಪ್ರಕಾರ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಡಾ. ಹಂಪಣ್ಣ ಸಜ್ಜನ ಅವರು  ಮಾತನಾಡಿ ಜೋಳ ಉತ್ಪನ್ನ ಖರೀದಿ ನೋಂದಣಿ ಕಾರ್ಯ ಮೇ 31 ರವರೆಗೆ ನೋಂದಣಿ  ಕೈಗೊಳ್ಳಲಾಗುವುದು. ಪ್ರತಿ ಕ್ವಿಂಟಲ್‍ಗೆ ಜೋಳ – (ಹೈಬ್ರೀಡ್) ಗೆ  3180 ರೂ ಹಾಗೂ ಜೋಳ-    ( ಮಾಲ್ಡಂಡಿ ) ಗೆ  3225 ರೂ. ನಿಗದಿಪಡಿಸಲಾಗಿದ್ದು,  ಖರೀದಿ ಪ್ರಕ್ರಿಯೆ ಎಪ್ರಿಲ್ 1 ರಿಂದ ಮೇ  31 ರವರೆಗೆ ಜರುಗಲಿದೆ.  ಶಾಖಾ ವ್ಯವಸ್ಥಾಪಕರು  ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಶಾಖಾ ಗದಗ ಹಾಗೂ  ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನರಗುಂದ ಈ ಎರಡು ಸಂಸ್ಥೆಗಳನ್ನು ಖರೀದಿ ಸಂಸ್ಥೆಗಳನ್ನಾಗಿ ನಿಗದಿಪಡಿಸಲಾಗಿದೆ.

 ಜಿಲ್ಲೆಯ   5 ಕಡೆಗಳಲ್ಲಿ  ಖರೀದಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಯಿತು.    

ಸಭೆಯಲ್ಲಿ ಕೃಷಿ ಇಲಾಖೆ, ಎಪಿಎಂಸಿ ಕಾರ್ಯದರ್ಶಿ, ಕೃಷಿ ಮಾರಾಟ ಇಲಾಖೆ, ಕಾನೂನು ಮಾಪನ ಇಲಾಖೆ, ಕೆ.ಎಫ್.ಸಿ.ಎಸ್.ಸಿ ಹಾಗೂ ಮಾರ್ಕೆಟಿಂಗ್ ಫೆಡರೇಶನ್‍ದ ಶಾಖಾ ವ್ಯವಸ್ಥಾಪಕರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಖರೀದಿ ಮಾರ್ಗಸೂಚಿಗಳನ್ವಯ  ಜಿಲ್ಲೆಯ 5 ಕಡೆಗಳಲ್ಲಿ  ಜೋಳ ಖರೀದಿ ಕೇಂದ್ರಗಳು  :  ಗದಗ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ,  ಲಕ್ಷ್ಮೇಶ್ವರ ಎಪಿಎಂಸಿ ಪ್ರಾಂಗಣ, ಮುಂಡರಗಿ ಎಪಿಎಂಸಿ ಪ್ರಾಂಗಣ, ನರಗುಂದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ, ರೋಣ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ