ಶಿವಮೊಗ್ಗ: ನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕರಾದ ಸೂರಪ್ಪ ಬಾಬು, ರೆಹಮಾನ್, ಎಂ.ಎನ್.ಕುಮಾರ್ ನಡುವಿನ ತಿಕ್ಕಾಟದ ಬೆನ್ನಲ್ಲೇ ಭಾನುವಾರ ಶಿವಮೊಗ್ಗದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ಪ್ರತಿಭಟನೆ ಮೆರವಣಿಗೆ ನಡೆಸಿ ನೆಚ್ಚಿನ ನಟನಿಗೆ ಬೆಂಬಲ ಸೂಚಿಸಿದರು. ನಗರದ ಗೋಪಿ ವೃತ್ತದಿಂದ ಮಹಾವೀರ ವೃತ್ತದವರೆಗೆ ಮೆರವಣಿಗೆ ನಡೆಸಿದ ಕಿಚ್ಚನ ಅಭಿಮಾನಿಗಳು, ರಕ್ತದ ಕಣ ಕಣ ಕೂಗುತ್ತಿದೆ ಕಿಚ್ಚ ಕಿಚ್ಚ ಎನ್ನುತ್ತಿದೆ ಎಂಬ ಘೋಷಣೆ ಕೂಗಿದರು. ಅಲ್ಲದೆ, ನಮ್ಮ ಹತ್ರ ಬೇಡವೆಂದು ನಟ ಕಿಚ್ಚ ಸುದೀಪ್‌ನ ಬ್ಯಾನರ್ ಹಿಡಿದು ನಿರ್ಮಾಪಕರ ವಿರುದ್ಧ ಪ್ರತಿಭಟನೆ ನಡೆಸಿದರು. ಸುದೀಪ್ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಟನ ಪರವಾಗಿ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಕೆ ಹೇಳಿದರು. ನಟ ಸುದೀಪ್ ಅಭಿಮಾನಿಗಳಾದ ರಾಜೀವ್, ಸಮರ್ಥ್‌ಗೌಡ, ಪುಷ್ಪಕ್, ರಂಗನಾಥ್, ಸಾಗರ್, ಸತೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.