ಹರೀಶ್ ಮೋಟುಕಾನ ಮಂಗಳೂರು
ಕರಾವಳಿ ಮೀನುಗಾರರಿಗೆ ಈ ಬಾರಿಯ ಮೀನುಗಾರಿಕಾ ಋತು ಆಶಾದಾಯಕವಾಗಿಲ್ಲ. ಕಷ್ಟಪಟ್ಟು ಮೀನುಗಾರಿಕೆ ನಡೆಸುವ ಬೋಟುಗಳಿಗೆ ಮೀನು ಸಿಗದೆ ಆರಂಭದಲ್ಲೇ ಮೀನು ಕ್ಷಾಮ ತಲೆದೋರಿದೆ. ಪರಿಣಾಮ ಬಹಳಷ್ಟು ಮೀನುಗಾರಿಕಾ ಬೋಟುಗಳು ದಡದಲ್ಲೇ ಲಂಗರು ಹಾಕಿವೆ. ಇದರಿಂದ ಮೀನುಗಾರರು ಸಂಕಷ್ಟ ಎದುರಿಸುವಂತಾಗಿದೆ.
ಜು.31ರಂದು ಮೀನುಗಾರಿಕಾ ನಿಷೇಧ ಅವಧಿ ಮುಗಿದ ಬಳಿಕ ಆಳಸಮುದ್ರ ಸಹಿತ ಎಲ್ಲ್ಲ ವಿಧದ ಬೋಟುಗಳು ಉತ್ಸಾಹದಿಂದ ಸಮುದ್ರಕ್ಕೆ ಇಳಿದಿದ್ದವು. ಆದರೆ ಶೇ.95ರಷ್ಟು ಬೋಟುಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಕ್ಕಿಲ್ಲ. ಹೇರಳವಾಗಿ ಮೀನಿನ ಲಭ್ಯತೆ ಇಲ್ಲದೆ ಇರುವುದರಿಂದ ಗ್ರಾಹಕರೂ ದುಬಾರಿ ಬೆಲೆ ನೀಡಿ ಮೀನು ಖರೀದಿಸುವಂತಾಗಿದೆ.
ಶೇ.50 ಬೋಟು ಲಂಗರು:
ಮೀನುಗಾರಿಕಾ ಬಂದರುಗಳಾದ ಮಂಗಳೂರು ಹಾಗೂ ಮಲ್ಪೆಯಲ್ಲಿ ಶೇ.50ರಷ್ಟು ಮೀನುಗಾರಿಕಾ ಬೋಟುಗಳು ಲಂಗರು ಹಾಕಿವೆ. ಇದರ ಪರಿಣಾಮ ಕರಾವಳಿ ಆರ್ಥಿಕತೆ ಮೇಲೆ ಬೀಳುತ್ತಿದೆ. ಮಂಗಳೂರು ಹಾಗೂ ಮಲ್ಪೆಯಲ್ಲಿ ಪ್ರತಿ ದಿನ ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ. ಲಕ್ಷಾಂತರ ಮಂದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮೀನುಗಾರಿಕೆಯನ್ನು ಅವಲಂಬಿಸಿಕೊಂಡಿದ್ದಾರೆ.
25 ವರ್ಷದಲ್ಲಿ ಇದೇ ಮೊದಲು:
25 ವರ್ಷಗಳಲ್ಲಿ ಇಷ್ಟೊಂದು ಮೀನು ಕ್ಷಾಮ ಎದುರಾಗಿಲ್ಲ. ಆ.10ರಿಂದ ಆಳಸಮುದ್ರ ಬೋಟುಗಳು ಹಾಗೂ ಆ.15ರ ಬಳಿಕ ಪರ್ಸೀನ್ ಸಹಿತ ಇನ್ನಿತರ ಬೋಟುಗಳು ಮೀನುಗಾರಿಕೆಗೆ ತೆರಳುತ್ತಿದ್ದರೂ ಎಲ್ಲರೂ ಬರಿಗೈಯಲ್ಲಿ ಮರಳುತ್ತಿದ್ದಾರೆ. ಡೀಸೆಲ್ ಹಾಗೂ ಕಾರ್ಮಿಕರ ಕೂಲಿ ನೀಡಲೂ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಮೀನುಗಾರರು ಮೀನುಗಾರಿಕೆ ಸ್ಥಗಿತಗೊಳಿಸಿದ್ದಾರೆ. ಕಳೆದ ವರ್ಷ ಈ ಸಮಯದಲ್ಲಿ ಬಂಗುಡೆ, ಬೂತಾಯಿ, ಬೊಂಡಾಸ್, ಅಂಜಲ್, ರಿಬ್ಬನ್ ಫಿಶ್ ಮೊದಲಾದವು ಹೇರಳವಾಗಿ ಲಭಿಸಿವೆ. ಈ ವರ್ಷ ಅರ್ಧದಷ್ಟೂ ಇಲ್ಲ. ಹಾಗಾಗಿ ಮಾರುಕಟ್ಟೆಯಲ್ಲಿ ಬಂಗುಡೆ, ಬೂತಾಯಿ ದರ ಇನ್ನೂ ದುಬಾರಿಯಾಗಿದೆ ಎಂದು ಮಂಗಳೂರಿನ ಬೋಟು ಮಾಲೀಕ ಅಬ್ದುಲ್ ಬಶೀರ್ ತಿಳಿಸಿದ್ದಾರೆ.
ಬಂಗುಡೆ 300 ರೂ., ಬೂತಾಯಿ 200 ರೂ.
ಕೆಲವು ಬೋಟುಗಳಿಗೆ ಸಿಗುವ ಅಲ್ಪಸ್ವಲ್ಪ ಮೀನು ಖರೀದಿಗೆ ವ್ಯಾಪಾರಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಸಾಮಾನ್ಯವಾಗಿ 100 ರೂ.ಗೆ ಮಾರಾಟವಾಗುವ ಬಂಗುಡೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ 300 ರೂ. ಹಾಗೂ ಬೂತಾಯಿಗೆ 200 ರೂ., ಅಂಜಲ್‌ಗೆ 800 ರೂ. ದರವಿದೆ. ಸೀಸನ್‌ಲ್ಲಿ ಮೀನು ಇಷ್ಟೊಂದು ದುಬಾರಿಯಾಗಿರುವುದು ಇದೇ ಮೊದಲು. ಇದರಿಂದ ವ್ಯಾಪಾರಿಗಳಿಗೂ ಸಮಸ್ಯೆಯಾಗಿದೆ ಎನ್ನುತ್ತಾರೆ ಮೊಹಮ್ಮದ್ ಆರೀಫ್.
-
ಮೀನು ಸಂತತಿ ನಾಶಕ್ಕೆ ಕಾರಣ
ಸಮುದ್ರದಲ್ಲಿ ವರ್ಷದಿಂದ ವರ್ಷಕ್ಕೆ ಮೀನುಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಇದಕ್ಕೆ ಮೀನುಗಾರಿಕಾ ಬೋಟ್‌ಗಳ ಸಂಖ್ಯೆ ಹೆಚ್ಚಳ, ಕೈಗಾರಿಕೆಗಳಿಂದ ಮಾಲಿನ್ಯಯುಕ್ತ ನೀರು ನೇರವಾಗಿ ಸಮುದ್ರಕ್ಕೆ ಬಿಡುವುದು ಹಾಗೂ ತಾಪಮಾನ ಏರಿಕೆ ಪ್ರಮುಖ ಕಾರಣ ಎಂದು ಮೀನುಗಾರಿಕಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹಸಿರು ಪರಿಸರ ನಾಶದ ಪರಿಣಾಮ ತಾಪಮಾನ ಏರಿಕೆಯಾಗುತ್ತಿದೆ. ಇದರಿಂದ ಸಮುದ್ರದ ನೀರು ಬಿಸಿಯಾಗುವುದರಿಂದ ಬಂಗುಡೆ, ಬೂತಾಯಿ ಮೊದಲಾದ ಮೀನುಗಳ ಸಂತತಿ ಕಡಿಮೆಯಾಗುತ್ತಿದೆ. ಸಮುದ್ರ ಕೆಲವೊಮ್ಮೆ ನೀಲಿ ಬಣ್ಣದಿಂದ ಕಾಣಲು ತಾಪಮಾನ ಏರಿಕೆಯೇ ಕಾರಣ. ಪ್ರಮುಖ ಕೈಗಾರಿಕೆಗಳು ವಿಷಯುಕ್ತ ಕೊಳಚೆ ನೀರನ್ನು ನೇರವಾಗಿ ಸಮುದ್ರಕ್ಕೆ ಬಿಡುತ್ತಿರುವುದು ಮೀನುಗಳ ನಾಶಕ್ಕೆ ಕಾರಣವಾಗುತ್ತಿವೆ.
ಈ ಬಾರಿ ಉತ್ತಮ ಮಳೆಯಾದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಮೀನು ಲಭಿಸಬಹುದು ಎನ್ನುವ ನಿರೀಕ್ಷೆ ಮೀನುಗಾರರಲ್ಲಿತ್ತು. ಆದರೆ ಮೀನುಗಾರಿಕೆಗೆ ತೆರಳಿದ ಮೀನುಗಾರರಿಗೆ ಅಸಲು ಕೂಡ ಆಗುತ್ತಿಲ್ಲ. ಪ್ರತಿಕೂಲ ಹವಾಮಾನದ ಜತೆಗೆ ಮೀನಿನ ಲಭ್ಯತೆಯೇ ಇಲ್ಲದೆ ಮೀನುಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಸಾಲ ಮಾಡಿ ಬೋಟು ಮಾಡಿದವರು ಸಾಲದ ಕಂತು ಕಟ್ಟಲು ಪರದಾಡುವಂತಾಗಿದೆ.
ಮೋಹನ್ ಬೆಂಗ್ರೆ, ಮತ್ಸೊೃೀದ್ಯಮಿ