ಜಿಲ್ಲೆ

ವರ್ಷದ ನಂತರ ಮನೆಗೆ ಮರಳಲೊಪ್ಪಿದ ಪತಿರಾಯ!

ಸುಭಾಸ ಹೆಗಡೆ ಧೂಪದಹೊಂಡ

ಮುಂಡಗೋಡ: ವರ್ಷದ ಹಿಂದೆ ಮನೆಬಿಟ್ಟು ಹೋದ ಪತಿರಾಯನನ್ನು ಪತ್ತೆ ಹಚ್ಚಿ ಸಾಧನಾ ಮಹಿಳಾ ಸಾಂತ್ವನ ಕೇಂದ್ರದವರು, ಮನೆಗೆ ಮರಳಲು ಒಪ್ಪಿಸಿದ ಘಟನೆ ಭಾನುವಾರ ನಡೆದಿದೆ.

ತಾಲೂಕಿನ ಹನುಮಾಪುರ ಗ್ರಾಮದ ಅಂಗನವಾಡಿ ಸಹಾಯಕಿ ಸುಮಂಗಲಾ ಹೊಸಮನಿ ಹಾಗೂ ಧಾರವಾಡದ ಹಳ್ಳಿಕೇರಿ ಗ್ರಾಮದ ಯಲ್ಲಪ್ಪ ಹೊಸಮನಿ 2011ರಲ್ಲಿ ಪಟ್ಟಣದ ಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದರು. ಅವರಿಗೆ 7 ವರ್ಷದ ಗಂಡು ಮಗು ಹಾಗೂ 5 ವರ್ಷದ ಹೆಣ್ಣು ಮಗುವಿದೆ. ಕಳೆದ ಒಂದು ವರ್ಷದ ಹಿಂದೆ ಯಲ್ಲಪ್ಪ ಹೊಸಮನಿ ಪತ್ನಿ, ಮಕ್ಕಳನ್ನು ಬಿಟ್ಟು ಹೋಗಿದ್ದ. ಪತಿ ಕರೆ ಸ್ವೀಕರಿಸುತ್ತಿಲ್ಲ, ಕುಟುಂಬಕ್ಕೆ ಸಹಾಯ ಮಾಡುತ್ತಿಲ್ಲ. ದಯವಿಟ್ಟು ಪತಿಯನ್ನು ಹುಡುಕಿ ಕೊಡಿ ಎಂದು ಕಳೆದ 6 ತಿಂಗಳ ಹಿಂದೆ ಸುಮಂಗಲಾ ಹೊಸಮನಿ ಇಲ್ಲಿನ ಸಾಧನಾ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದರು.

ದೂರು ದಾಖಲಿಸಿಕೊಂಡ ಸಾಂತ್ವನ ಕೇಂದ್ರ ಕಳುಹಿಸಿದ ಕೆಲ ನೋಟಿಸ್​ಗಳನ್ನು ಯಲ್ಲಪ್ಪ ಪಡೆದಿದ್ದರೆ, ಕೆಲವು ವಾಪಸ್ ಬಂದಿವೆ. ಪತಿ ಇರುವುದನ್ನು ಖಚಿತಪಡಿಸಿಕೊಂಡ ಸಾಧನಾ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಇಸಾಬೆಲ್ಲಾ ಜೇವಿಯರ್ ಹಾಗೂ ಸಿಬ್ಬಂದಿ ಭಾನುವಾರ ಸುಮಂಗಲಾ ಅವರನ್ನು ಕರೆದುಕೊಂಡು ಧಾರವಾಡದ ಹಳ್ಳಿಕೇರಿ ಗ್ರಾಮಕ್ಕೆ ಹೋಗಿದ್ದಾರೆ. ಮುನ್ಸೂಚನೆ ನೀಡದೆ ಸಿಬ್ಬಂದಿ ಸಮೇತ ಮನೆಗೆ ಭೇಟಿ ನೀಡಿದ್ದರಿಂದ ಆತನ ಕುಟುಂಬದವರು ಗ್ರಾ.ಪಂ. ಅಧ್ಯಕ್ಷರನ್ನು ಕರೆಸಿದ್ದಾರೆ. ಅವರು, ಪತ್ನಿ, ಮಕ್ಕಳೊಂದಿಗೆ ಜೀವನ ನಡೆಸುವಂತೆ ಯಲ್ಲಪ್ಪನಿಗೆ ತಿಳಿವಳಿಕೆ ನೀಡಿದ್ದಾರೆ. ಹಾಗೆಯೇ ಸೆ. 28ರಂದು ಆತನನ್ನು ಪತ್ನಿಯ ಹತ್ತಿರ ಕರೆದುಕೊಂಡು ಬಂದು ಜೀವನ ನಡೆಸಲು ಬಿಡುತ್ತೇವೆ ಎಂದು ಬರೆದು ಸಹಿ ಮಾಡಿ ಕೊಟ್ಟಿದ್ದಾರೆ.

ಧಾರವಾಡ ಗ್ರಾಮೀಣ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಕುರಿತ ಲಿಖಿತ ಪತ್ರದೊಂದಿಗೆ, ಭೇಟಿಯಾದ ಬಗ್ಗೆ ವರದಿ ಮತ್ತು ಅರ್ಜಿ ದಾಖಲು ಮಾಡಿ ಅಂಗನವಾಡಿ ಸಹಾಯಕಿಯನ್ನು ವಾಪಸ್ ಕಳಿಸಿಕೊಟ್ಟಿದ್ದೇವೆ ಎಂದು ಮುಖ್ಯಸ್ಥೆ ಇಸಾಬೆಲ್ಲಾ ಜೇವಿಯರ್ ವಿಜಯವಾಣಿಗೆ ತಿಳಿಸಿದ್ದಾರೆ. ಈ ವೇಳೆ ಸಿಬ್ಬಂದಿ ದುರ್ಗಪ್ಪ ಹೊಸಮನಿ ಮತ್ತು ಕೆ. ಪ್ರಶಾಂತ ಇದ್ದರು.