ಜಿಲ್ಲೆ

ಕುಟುಂಬ ಯೋಜನೆ, ಭ್ರೂಣ ಹತ್ಯೆಯಿಂದ ಸಮಾಜದಲ್ಲಿ ಸಮಸ್ಯೆ ಸೃಷ್ಟಿ: ಡಾ.ಸಿ.ಶರತ್‌ಕುಮಾರ್ ಆತಂಕ

ಮೈಸೂರು: ಕುಟುಂಬ ಯೋಜನೆ ಹಾಗೂ ಭ್ರೂಣ ಹತ್ಯೆಯಂತಹ ಪ್ರಕರಣಗಳು ಈಗ ನಮ್ಮ ಸಮಾಜದಲ್ಲಿ ದೊಡ್ಡ ಸಮಸ್ಯೆ ಸೃಷ್ಟಿಸುತ್ತಿದ್ದು, ಈ ಬಗ್ಗೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಮೆಡಿವೇವ್ ಗರ್ಭಧಾರಣಾ ಕೇಂದ್ರದ ಡಾ.ಸಿ.ಶರತ್‌ಕುಮಾರ್ ಅಭಿಪ್ರಾಯಪಟ್ಟರು.
ಶ್ರೀವಾಸುದೇವ ಮಹಾರಾಜ್ ಫೌಂಡೇಷನ್‌ನಿಂದ ವಾಸುದೇವ ಮಹರಾಜ್ ಅವರ 18ನೇ ಆರಾಧನಾ ಮಹೋತ್ಸವ ಅಂಗವಾಗಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾಸುದೇವ ಮಹಾರಾಜ್ ಸದ್ಬಾವನ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕುಟುಂಬ ಯೋಜನೆ ಹಾಗೂ ಭ್ರೂಣ ಹತ್ಯೆಯಂತಹ ಪ್ರಕರಣಗಳು ದೇಶದ ಜನಸಂಖ್ಯೆಯಲ್ಲಿ ಯುವಶಕ್ತಿಯ ಪ್ರಮಾಣವನ್ನು ಕಡಿಮೆಗೊಳಿಸುವ ಹಾಗೂ ಅಸಮಾನತೆ ಸೃಷ್ಟಿಸುವ ಸನ್ನಿವೇಶ ಉಂಟಾಗುತ್ತಿದೆ. ಒಂದೇ ಮಗು ಸಾಕು ಎನ್ನುವ ಆಲೋಚನೆಯೂ ಈ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲ ಅಗತ್ಯವಿದ್ದು, ಮಕ್ಕಳನ್ನು ಹೆರಲು ಹಿಂಜರಿಕೆ ಬೇಡ ಎಂದರು.
ಈ ಕುರಿತು ಈಗಲೇ ಚಿಂತನೆಗಳು ಆರಂಭಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧ್ದಿಗೂ ತೊಡಕಾಗುತ್ತದೆ. ಈ ಸಮಸ್ಯೆ ತಡೆದರೆ ಭಾರತ ಮುಂದಿನ 50 ವರ್ಷ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಉಕ್ರೇನ್-ರಷ್ಯಾ ಯುದ್ಧ, ಬಾಂಗ್ಲಾ ಹಿಂಸಾಚಾರಗಳನ್ನು ತಡೆಯುವಲ್ಲಿ ವಿಶ್ವ ಸಂಸ್ಥೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಯುದ್ಧ ಸಾಮಗ್ರಿ ಮಾರಾಟ ಮಾಡಲು ದೊಡ್ಡ ರಾಷ್ಟ್ರ ಎನಿಸಿಕೊಂಡವರು ದ್ವೇಷ ಬಿತ್ತುವಲ್ಲಿ ನಿರತರಾಗಿದ್ದಾರೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಯುದ್ಧಗಳು ನಿರಂತರವಾಗಿ ನಡೆಯುತ್ತಿದ್ದು, ಭವಿಷ್ಯದ ಪೀಳಿಗೆಗೆ ಆತಂಕ ಎದುರಾಗಿದೆ. ಪ್ರಸ್ತುತ ಜಗತ್ತಿಗೆ ನೈತಿಕ ಶಿಕ್ಷಣದ ಅಗತ್ಯವಿದೆ ಎಂದರು.
ಸಂಧ್ಯಾ ಸುರಕ್ಷಾ ಟ್ರಸ್ಟ್ ಸಂಸ್ಥಾಪಕ ಬಿ.ಆರ್.ನಟರಾಜ ಜೋಯಿಸ್ ಅವರು ವಾಸುದೇವ ಮಹಾರಾಜ್ ಸದ್ಬಾವನ ಪ್ರಶಸ್ತಿ ಸ್ವೀಕರಿಸಿದರು. ವಿ.ವಿ.ಮೊಹಲ್ಲಾದ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಸಿಇಒ ಕೆ.ಆರ್.ಯೋಗಾನರಸಿಂಹನ್, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಫೌಂಡೇಶನ್ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಮೋಹನ್ ಇದ್ದರು. ಬಳಿಕ ಕೊಳಲು ವಾದಕ ವಿನಾಯಕ ಹೊನ್ನಾವರ ಅವರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.