ಜಿಲ್ಲೆ

ಸೂರಿನ ಸೌಲಭ್ಯಕ್ಕಾಗಿ ಕಾದಿರುವ ರತ್ನಗಿರಿ ಹಾಡಿಯ 27 ಕುಟುಂಬ

ಇಂದಿಗೂ ತೆಂಗಿನಗರಿಯ ಗುಡಿಸಲಿನಲ್ಲಿ ವಾಸ

ಇರುಳಿಗ ಕುಟುಂಬಗಳ ಜನರ ಬದುಕಿಗೆ ಬೇಕಿದೆ ನೆರವು


ಸರ್ಕಾರಕ್ಕೆ ಮನವಿ ಸಲ್ಲಿಸಿದರು ಇಲ್ಲದ ಸ್ಪಂದನೆ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ತಾಲೂಕಿನ ಕೂಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರತ್ನಗಿರಿ ಹಾಡಿಯ ಇರುಳಿಗರಿಗೆ ನಿವೇಶನ ಹಕ್ಕುಪತ್ರ, ಸೂರು ದೊರೆಯಬೇಕಿದ್ದು ಇದಕ್ಕಾಗಿ 27 ಕುಟುಂಬಗಳು ಕನಸು ಕಾಣುತ್ತಿವೆ.

ಕೂಟಗಲ್ ಸಮೀಪದ ಎರೇಹಳ್ಳಿ-ಕೂಟಗಲ್ ರಸ್ತೆಯಲ್ಲಿ ಸರ್ವೇ ನಂ.94ರಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಈ ಕುಟುಂಬಗಳು ನೆಲೆ ಕಂಡುಕೊಂಡಿವೆ. ಕೇವಲ ತೆಂಗಿನಗರಿ ಗುಡಿಸಲೇ ಇವರಿಗೆ ಅರಮನೆ. ಇದರಲ್ಲಿಯೇ ಮಕ್ಕಳ ಪಾಲನೆ ಪೋಷಣೆ ಮಾಡುತ್ತ ಬದುಕುತ್ತಿದ್ದಾರೆ. ಕುಟುಂಬ ನಿರ್ವಹಣೆಗಾಗಿ ಕೂಟಗಲ್, ಎರೇಹಳ್ಳಿ ಭಾಗದ ಜಮೀನಿನಲ್ಲಿ ಕೃಷಿ ಕೆಲಸ, ರೇಷ್ಮೆ ತೋಟ ನಿರ್ವಹಣೆ, ಕೃಷಿ ಭೂಮಿಯಲ್ಲ್ಲಿ ಕೂಲಿ ಮಾಡುತ್ತಾರೆ. ಬಹುತೇಕ ಅನಕ್ಷರಸ್ಥರೇ ಆಗಿರುವ ಇವರು ಬಹು ದಿನಗಳಿಂದ ನಿವೇಶನ ಹಕ್ಕುಪತ್ರ ಮತ್ತು ಸೂರಿಗಾಗಿ ಸರ್ಕಾರಕ್ಕೆ ಮೊರೆ ಇಡುತ್ತಿದ್ದಾರೆ.

ಬೆಂಕಿಗಾಹುತಿಯಾಗಿದ್ದ 15 ಗುಡಿಸಲು

ಕಳೆದ ಮಾರ್ಚ್ ತಿಂಗಳಲ್ಲಿ ಹಾಡಿಯ 15 ಗುಡಿಸಲು ಬೆಂಕಿಗಾಹುತಿಯಾದವು. ಕುರಿ, ಮೇಕೆ, ಹಸು ಸೇರಿ ಇತರ ಸಾಕುಪ್ರಾಣಿಗಳು, ಮನೆಯಲ್ಲಿನ ದಿನಸಿ, ಬಟ್ಟೆ, ಬರೆ, ದಾಖಲೆಗಳು ಬೆಂಕಿಯಲ್ಲಿ ಸುಟ್ಟುಹೋದವು. ಕೆಲವು ವಯಸ್ಸಾದವರು ಗಾಯಗೊಂಡಿದ್ದರು. ಬೆಂಕಿ ಅವಘಡದಿಂದ ಆಘಾತಕ್ಕೊಳಗಾಗಿದ್ದ ಕುಟುಂಬಗಳಿಗೆ ಮುಂದಿನ ಬದುಕು ಹೇಗಪ್ಪ ಎಂಬ ಪ್ರಶ್ನೆ ಎದುರಾಗಿತ್ತು. ಅಂತಹ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, ರಾಮನಗರ ತಾಪಂ, ಗ್ರಾಪಂ ನೆರವಿನ ಹಸ್ತ ಚಾಚಿ ಅವರ ಬದುಕಿಗೆ ಸಹಾಯ ಮಾಡಿದವು. ಇದೇ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳು ಈ ಕುಟುಂಬಗಳ ವಾಸಕ್ಕೆ ಹಕ್ಕುಪತ್ರ ನೀಡುವ ಭರವಸೆಯನ್ನೂ ನೀಡಿದ್ದವು. ಆದರೆ, ಇದುವರೆಗೂ ಸಿಕ್ಕಿಲ್ಲ.

ಬೆಂಕಿ ಬಿದ್ದ ಸ್ಥಳದ ಪಕ್ಕದಲ್ಲೇ ಕಂದಾಯ ಇಲಾಖೆ ಬೇರೆ ಜಾಗ ಗುರುತಿಸಿ ಕೊಟ್ಟಿದ್ದು, ಮತ್ತೆ ಈ ಕುಟುಂಬಗಳು ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಮುಂದಿನ ಬದುಕಿನ ದೃಷ್ಟಿಯಿಂದ ನಾವು ವಾಸಿಸುವ ಜಾಗಕ್ಕೆ ಹಕ್ಕುಪತ್ರ ಸೂರು ಕಲ್ಪಿಸಬೇಕು ಎಂಬ ಕನಸು ರತ್ನಗಿರಿ ಹಾಡಿ ಜನರದ್ದಾಗಿದೆ. ರಾಜೀವ್‌ಗಾಂಧಿ ವಸತಿ ನಿಗಮ, ಜಿಲ್ಲಾಡಳಿತ ರತ್ನಗಿರಿ ಹಾಡಿಯ ಜನರ ಕೂಗಿಗೆ ಸ್ಪಂದಿಸಿ ಹಕ್ಕುಪತ್ರ ನೀಡಿ ಅಲ್ಲಿನ ಹಾಡಿ ಜನರ ಕನಸು ನನಸು ಮಾಡುವುದೇ ಕಾದು ನೋಡಬೇಕಿದೆ.

ಸುಟ್ಟುಹೋದ ದಾಖಲೆ ಪತ್ರಗಳು

ಬೆಂಕಿ ಬಿದ್ದ ಸಂದರ್ಭದಲ್ಲಿ ಕೆಲವರ ಆಧಾರ್‌ಕಾರ್ಡ್ ಮತ್ತಿತರ ದಾಖಲೆಗಳು ಸುಟ್ಟುಹೋಗಿವೆ. ಈಗ ದಾಖಲೆಗಳು ಇಲ್ಲದೆ ವಸತಿ ನಿಗಮಕ್ಕೆ ಅರ್ಜಿ ಹಾಕಲು ವಿಳಂಬವಾಗುತ್ತಿದೆ. ಪ್ರತಿಯೊಂದು ದಾಖಲೆ ಪಡೆದು ಸಲ್ಲಿಸಲು ಗ್ರಾಪಂ ಪ್ರಯತ್ನ ಪಡುತ್ತಲೇ ಇದೆ. ಸರ್ಕಾರ ಒಂದಷ್ಟು ಮಾನದಂಡಗಳ ಮೂಲಕ ವಿಶೇಷ ಆಸಕ್ತಿ ವಹಿಸಿ ಸರಳವಾಗಿ ಇಲ್ಲಿನ ಜನರ ದಾಖಲೆಗಳನ್ನು ಪಡೆದು ಇಲ್ಲಿ ವಾಸಿಸುವ ಪ್ರತಿ ಕುಟುಂಬಕ್ಕೂ ಸೂರು ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

80 ಲಕ್ಷ ರೂ. ಅನುದಾನ

ಸಮಾಜ ಕಲ್ಯಾಣ ಇಲಾಖೆಯಿಂದ ರಸ್ತೆ, ಚರಂಡಿ, ತಡೆಗೋಡೆ ನಿರ್ಮಾಣಕ್ಕೆ ಪರಿಶಿಷ್ಟ ಪಂಗಡ ಅಭಿವೃದ್ಧಿಗೆ 80 ಲಕ್ಷ ರೂ. ಅನುದಾನ ಮಂಜೂರಾಗಿದೆ ಎನ್ನಲಾಗಿದೆ. ಆದರೆ ಇಲ್ಲಿರುವ ಜಾಗ ಗುರುತಿಸಿ ಅವರಿಗೆ ಸೂಕ್ತ ಹಕ್ಕುಪತ್ರ ನೀಡಿದರಷ್ಟೇ ಸಮಾಜ ಕಲ್ಯಾಣ ಇಲಾಖೆಯ ಮುತುವರ್ಜಿ ಅಭಿವೃದ್ಧಿ ಕೆಲಸಗಳು ಸಾರ್ಥಕವಾಗುತ್ತದೆ.

-

11 ಜನರ ದಾಖಲೆ ಪಡೆದು ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಕಳಿಸಲಾಗಿದೆ. ಶೀಘ್ರದಲ್ಲೇ ಅವರಿಗೆ ಹಕ್ಕುಪತ್ರ ಸಿಗಲಿದೆ. 7 ಕುಟುಂಬಗಳ ದಾಖಲೆಗಳ ಪ್ರಕ್ರಿಯೆ ನಡೆಯುತ್ತಿದ್ದು, ಅವುಗಳನ್ನು ನಿಗಮಕ್ಕೆ ಕಳಿಸಲಾಗುತ್ತದೆ. ಹಕ್ಕುಪತ್ರ ವಿತರಣೆ ಆದ ಕೂಡಲೇ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ.

                                                                                  ಟಿ. ಪ್ರದೀಪ್, ತಾಪಂ ಇಒ ರಾಮನಗರ

ಹಾಡಿ ಜನರ ಬದುಕು ಕಷ್ಟಕರವಾಗಿದೆ. ಅವರಿಗೆ ವಸತಿ, ಸೂರು ಕಲ್ಪಿಸಲು ಜಾಗ ಕೂಡ ಗುರುತಿಸಲಾಗಿದೆ. ಗುಡಿಸಲಿಗೆ ಬೆಂಕಿ ಬಿದ್ದ ಸಂದರ್ಭದಲ್ಲಿ ಹಾಡಿಯ ಜನರ ಕಷ್ಟ ಕಂಡಿದ್ದೇವೆ. ಇಂದಿಗೂ ಗರಿ ಶೆಡ್‌ನಲ್ಲೇ ಬದುಕುತ್ತಿದ್ದಾರೆ. ಕೂಡಲೇ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಇಲ್ಲಿನ ಜನರಿಗೆ ನಿವೇಶನ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು.

ನಂದೀಶ್, ಗ್ರಾಪಂ ಸದಸ್ಯ, ಎರೇಹಳ್ಳಿ

ರತ್ನಗಿರಿ ಹಾಡಿಯ ಜನರಿಗೆ ವಸತಿ ಕಲ್ಪಿಸಲು ನರೇಗಾ ಯೋಜನೆ ಮೂಲಕ ಜಾಗವನ್ನು ಸಮತಟ್ಟು ಮಾಡಿಸಲಾಗಿದೆ. ಹಕ್ಕುಪತ್ರ ಕೊಡಿಸಲು ಸರ್ಕಾರದ ಹಂತದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಹಕ್ಕುಪತ್ರ ನೀಡಿದ ನಂತರ ಗ್ರಾಪಂ ವಿಶೇಷ ಆಸಕ್ತಿವಹಿಸಿ ಸಂಬಂಧಪಟ್ಟ ಇಲಾಖೆಗಳ ಸಹಕಾರದಲ್ಲಿ ನೀರು, ವಿದ್ಯುತ್, ರಸ್ತೆ, ಚರಂಡಿ ಸೇರಿ ಮೂಲಸೌಲಭ್ಯ ಒದಗಿಸುತ್ತದೆ.

                                                                            ಎ.ಎಲ್. ಸವಿತಾ, ಗ್ರಾಪಂ ಅಧ್ಯಕ್ಷೆ, ಕೂಟಗಲ್