ಜಿಲ್ಲೆ

ಸುಳ್ಳು ದಾಖಲೆ ಸೃಷ್ಟಿಸಿ ಠಾಣಾ ಜಾಗ ವಶ: ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯಿಂದ ಅನಿರ್ದಿಷ್ಟಾವಧಿ ಧರಣಿ

ಚನ್ನಗಿರಿ: ಹರೋನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಠಾಣಾ ಜಾಗವನ್ನು ಕೆಲವರು ಸುಳ್ಳು ದಾಖಲೆ ಸೃಷ್ಟಿಸಿ ಕಬಳಿಸಿದ್ದು, ಅದನ್ನು ತೆರವುಗೊಳಿಸಿ ನಿವೇಶನರಹಿತರಿಗೆ ವಿತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆ ಪದಾಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

ಸಂಘಟನೆ ಅಧ್ಯಕ್ಷ ಪುನೀತ್‌ಕುಮಾರ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಠಾಣಾ ಇರುತ್ತವೆ. ಅವುಗಳನ್ನು ನಿವೇಶನ ರಹಿತರಿಗೆ, ಸರ್ಕಾರಿ ಕಟ್ಟಡಗಳಿಗೆ ಮತ್ತು ಇತರೆ ಅಭಿವೃದ್ಧಿಗಳಿಗಾಗಿ ಬಳಕೆ ಮಾಡಲೆಂದು ಬಿಡಲಾಗಿರುತ್ತದೆ.

ಆದರೆ, ಪ್ರಭಾವಿ ವ್ಯಕ್ತಿಗಳು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಧಿಕಾರಿಗಳ ಮನವೊಲಿಸಿ ತಮ್ಮಂತೆ ಮಾಡಿಕೊಂಡಿದ್ದಾರೆ.

ಅಂತಹ ಅಧಿಕಾರಿಗಳು ಯಾರೇ ಇದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಹರೋನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ 14 ಎಕರೆ ಪ್ರದೇಶ ಗ್ರಾಮ ಠಾಣಾ ಎಂದು ಗುರುತಿಸಲಾಗಿದೆ. ಆದರೆ, ಇಂದು ಒಂದು ಅಡಿಯಷ್ಟೂ ಜಾಗ ಇಲ್ಲದಂತೆ ಮಾಡಲಾಗಿದೆ.

ಪಂಚಾಯಿತಿ ಅಧಿಕಾರಿಗಳು ಅಕ್ರಮವಾಗಿ ಅವರ ಹೆಸರಿಗೆ ಖಾತೆ ಮಾಡಿಸಿದ್ದಾರೆ. ಈಗಾಗಲೇ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ತೆರವುಗೊಳಿಸಿ ಸ್ಥಳ ಕಾಯ್ದಿರಿಸುವಂತೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ.

ತಕ್ಷಣ ತೆರವುಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.

ಉಪ ವಿಭಾಗಾಧಿಕಾರಿ ರೇಷ್ಮಾ ಹಾನಗಲ್ ಮಾತನಾಡಿ, ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಸಂಘಟನೆ ಕಾರ್ಯದರ್ಶಿ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಜಯಂತ, ಬಿ. ಉಮೇಶ್ ಬಿ ಸೋದ್, ಮಧುರಾಜ ಇದ್ದರು.