ಜಿಲ್ಲೆ

ಆರೋಪಿ ಜಾಮೀನು ಅರ್ಜಿ ತಿರಸ್ಕೃತ - ವಿವಾಹವಾಗುವುದಾಗಿ ನಂಬಿಸಿ ವಂಚನೆ ಪ್ರಕರಣ

Mangaluru - Nishantha Narayana

ಸಹಪಾಠಿ ಯುವತಿಯನ್ನು ಪ್ರೀತಿ ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ ಪ್ರಕರಣದಲ್ಲಿ ಜೈಲಲು ಸೇರಿದ ಶ್ರೀಕೃಷ್ಣ ಜೆ.ರಾವ್(೨೧) ಜಾಮೀನು ಅರ್ಜಿಯನ್ನು ಮಂಗಳೂರು ೬ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಮಾರುತಿ ಕಾಮಟೆ ವಜಾಗೊಳಿಸಿದ್ದಾರೆ.

ಆರೋಪಿ ಪರ ವಕೀಲರು, ‘ಆರೋಪಿಯು ವಿದ್ಯಾರ್ಥಿಯಾಗಿದ್ದು, ಆತನ ಭವಿಷ್ಯಕ್ಕೆ ಧಕ್ಕೆಯಾಗಲಿದೆ. ಇದು ಸಮ್ಮತಿಯ ಸಂಬಂಧವಾಗಿತ್ತು. ಆತನ ಕುಟುಂಬ ಸಮಾಜದಲ್ಲಿ ಗೌರವಾನ್ವಿತವಾಗಿದ್ದು, ತಲೆಮರೆಸಿಕೊಳ್ಳುವ ಸಾಧ್ಯತೆಯಿಲ್ಲ’ ಎಂದು ವಾದಿಸಿ ಜಾಮೀನಿಗೆ ಮನವಿ ಮಾಡಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕರು, ‘ಆರೋಪ ಅತ್ಯಂತ ಗಂಭೀರ ಸ್ವರೂಪದ್ದಾಗಿದೆ. ಸಂತ್ರಸ್ತೆಯ ಹೇಳಿಕೆ ಮತ್ತು ಡಿಎನ್‌ಎ ಪರೀಕ್ಷೆ ಬಾಕಿಯಿದೆ. ಆರೋಪಿಯ ತಂದೆ ಪ್ರಭಾವಿಯಾಗಿದ್ದು, ಜಾಮೀನು ದೊರೆತರೆ ಸಾಕ್ಷ್ಯ ನಾಶಪಡಿಸುವ ಹಾಗೂ ಸಂತ್ರಸ್ತೆ ಮತ್ತು ಆಕೆಯ ಮಗುವಿನ ಮೇಲೆ ಒತ್ತಡ ಹೇರುವ ಎಲ್ಲ ಸಾಧ್ಯತೆಗಳಿವೆ. ಆದ್ದರಿಂದ ಜಾಮೀನು ನೀಡಬಾರದು’ ಎಂದು ಪ್ರತಿವಾದಿಸಿದರು.

ವಾದವನ್ನು ಆಲಿಸಿದ ನ್ಯಾಯಪೀಠ, ಪ್ರಕರಣದ ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು. ‘ಪ್ರಕರಣದ ತನಿಖೆ ಇನ್ನೂ ಆರಂಭಿಕ ಹಂತದಲ್ಲಿದೆ. ಆರೋಪಗಳು ಗಂಭೀರವಾಗಿದ್ದು, ಮೇಲ್ನೋಟಕ್ಕೆ ಸತ್ಯಾಂಶವಿದೆ ಎಂಬುದು ಕಂಡುಬರುತ್ತದೆ. ಸಂತ್ರಸ್ತೆ ಮಗುವಿಗೆ ಜನ್ಮ ನೀಡಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಂತದಲ್ಲಿ ಜಾಮೀನು ನೀಡುವುದರಿಂದ ತನಿಖೆಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಇದು ಸಮಾಜದ ಹಿತದೃಷ್ಟಿಯಿಂದಲೂ ಸರಿಯಲ್ಲ’ ಎಂದು ಅಭಿಪ್ರಾಯಪಟ್ಟು, ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?

ಸಂತ್ರಸ್ತ ಯುವತಿ ಪ್ರೌಢಶಾಲೆಯಿಂದಲೇ ಪರಿಚಿತರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ೨೦೨೪ರ ಅಕ್ಟೋಬರ್ ಹಾಗೂ ೨೦೨೫ರ ಜನವರಿಯಲ್ಲಿ ಆರೋಪಿಯು ಮದುವೆಯಾಗುವ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಪರ್ಕ ನಡೆಸಿದ್ದು, ಗರ್ಭಿಣಿಯಾಗುತ್ತಿದ್ದ ವಿಚಾರ ತಿಳಿಯುತ್ತಿದ್ದಂತೆ ವಿವಾಹದ ಪ್ರಾಯವಾಗಿಲ್ಲ ಎಂದು, ಪ್ರಾಯವಾಗುತ್ತಿದ್ದಂತೆ ಮದುವೆ ನಿರಾಕರಣೆ ಮಾಡಿದ ವಿಚಾರದಲ್ಲಿ ಸಂತ್ರಸ್ತೆ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದರು.