ಜಿಲ್ಲೆ

ಹೋರಾಟಗಾರರ ವಿರುದ್ಧ ಸುಳ್ಳು ಪ್ರಕರಣ : ಗಿರೀಶ್ ಮಟ್ಟಣ್ಣನವರ್ ಆರೋಪ

ಸೌಮ್ಯ ಆರ್

ಕಡಬ: ಸೌಜನ್ಯಾ ಪರ ಧ್ವನಿ ಎತ್ತಿದವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ. ಜತೆಗೆ ಹೋರಾಟಗಾರರ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಸೌಜನ್ಯಾ ಪರ ಹೋರಾಟದಲ್ಲಿ ಗುರುತಿಸಿಕೊಂಡಿರುವ ಗಿರೀಶ್ ಮಟ್ಟಣ್ಣನವರ್ ಆರೋಪಿಸಿದ್ದಾರೆ.

ಕಡಬ ಆಡಳಿತ ಸೌಧದಲ್ಲಿ ತಹಸೀಲ್ದಾರ್‌ಗೆ ಜನಾಗ್ರಹ ಮನವಿ ನೀಡಿ ಮಾತನಾಡಿದರು.

ಸುಳ್ಯ ಮತ್ತು ಕಡಬದಲ್ಲಿ ಹೆಚ್ಚು ಹೋರಾಟಗಾರು ಇದ್ದಾರೆ. ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದರೂ ಮಹೇಶ್ ಶೆಟ್ಟಿ ತಿಮರೋಡಿ ಮೆಟ್ಟಿ ನಿಂತು ಬಂದಿದ್ದಾರೆ. ಎಸ್‌ಐಟಿ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದೆ ಎಂದರು.

ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಅಂತರ ಮಾತನಾಡಿ, ಹೋರಾಟಗಾರರ ವಿರುದ್ಧ ಸುಳ್ಳು ಕೇಸು ದಾಖಲಿಸಿ ಧಮನಿಸಿದರೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಹೆಣ್ಣು ಮಗುವಿಗೆ ನ್ಯಾಯ ಸಿಗಬೇಕೆಂಬುದು ನಮ್ಮ ಹೋರಾಟದ ಆಶಯವಾಗಿದೆ. ಕೊಲೆ ಪ್ರಕರಣದ ನೈಜ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು. ಈಗಾಗಲೇ ಸರ್ಕಾರ ರಚಿಸಿದ ಎಸ್.ಐ.ಟಿ ತನಿಖೆ ಪಾರದರ್ಶಕವಾಗಿ ನಡೆದು ನ್ಯಾಯಯುತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಹೋರಾಟದ ಬೆಂಬಲಿಗ ಕಡಬದ ವಾಸು ಕೊಳ್ಳೆಸಾಗು ಮಾತನಾಡಿದರು. ಸೌಜನ್ಯಾ ಹೋರಾಟ ಸಮಿತಿ ಕಡಬ ತಾಲೂಕು ಅಧ್ಯಕ್ಷ ಸರ್ವೋತ್ತಮ ಗೌಡ, ಕಾರ್ಯದರ್ಶಿ ಶರತ್ ರೈ, ಭೀಮ್ ಆರ್ಮಿ ಸಂಘಟನೆ ದ.ಕ. ಜಿಲ್ಲಾ ಉಪಾಧ್ಯಕ್ಷ ರಾಘವ ಕಳಾರ, ಹೋರಾಟ ಬೆಂಬಲಿಗರಾದ ರುಕ್ಮಯ ಗೌಡ , ಯೋಗೀಶ್ ಪಂಜೋಡಿ, ವಿಜಯ್ ಕೊಣಾಜೆ, ಪ್ರತೀಕ್ ಕಾರ್ಕಳ, ಸುರೇಶ್, ಪ್ರಶಾಂತ್, ಪುರಂದರ ಕೊಡಿಂಬಾಳ, ಬಾಲಣ್ಣ ಗೌಡ ಸುಳ್ಯ, ನಾರಾಯಣ ಗೌಡ ಬೀಡು ಮತ್ತಿತರರಿದ್ದರು. ಕಡಬ ಉಪ ತಹಸೀಲ್ದಾರ್ ಗೋಪಾಲ್ ಮನವಿ ಸ್ವೀಕರಿಸಿ, ಸರ್ಕಾರಕ್ಕೆ ಮನವಿ ತಲುಪಿಸಲಾಗುವುದು ಎಂದರು.