ಜಿಲ್ಲೆ

ಸೋಲಿನ ಹತಾಶೆಯಿಂದ ಆರೋಪ

Haveri

ಬ್ಯಾಡಗಿ: ಎಪಿಎಂಸಿ ನಿರ್ದೇಶಕ ಶಂಭನಗೌಡ್ರ ಪಾಟೀಲ ಅವರು ಸೋಲಿನ ಹತಾಶೆಯಿಂದ ಪಕ್ಷದ ಮುಖಂಡರು ಹಾಗೂ ಎಪಿಎಂಸಿ ನಿರ್ದೇಶಕರ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ, ನಿರ್ದೇಶಕ ಕರಬಸಪ್ಪ ನಾಯ್ಕರ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪಕ್ಷದ ಬೆಂಬಲದಿಂದ ಎಪಿಎಂಸಿ ಅಧ್ಯಕ್ಷನಾಗಿ 20 ತಿಂಗಳ ಅವಧಿ ಪೂರ್ಣಗೊಳಿಸಿದ್ದೇನೆ. ಪ್ರಸಕ್ತ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್​ನ ಮೂವರು ವಿಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಇದರಿಂದ ಪಕ್ಷದ ಅಭ್ಯರ್ಥಿಯ ಸೋಲು ನಮಗೂ ನೋವು ತಂದಿದೆ. ನಮ್ಮ ಒಳಜಗಳ, ಭಿನ್ನಾಭಿಪ್ರಾಯದಿಂದ ಅಧ್ಯಕ್ಷ ಸ್ಥಾನ ಕೈತಪ್ಪಿದೆ. ಘಟನೆಯಿಂದ ಕಾರ್ಯಕರ್ತರಿಗೆ ತೀವ್ರ ಆಘಾತ ತಂದಿದೆ ಎಂದರು.

ಪಕ್ಷದ ಆಂತರಿಕ ಸಮಸ್ಯೆಯನ್ನು ಪಕ್ಷದ ವೇದಿಕೆಯಲ್ಲಿ ರ್ಚಚಿಸಬೇಕೆ ಹೊರತು, ಯಾವುದೇ ಕಾರಣಕ್ಕೂ ಬೀದಿಗೆ ತರುವುದು ಬೇಡ. ಸಮಸ್ಯೆಗಳ ಕುರಿತು ಇನ್ನುಮುಂದೆ ಪಕ್ಷದ ಮುಖಂಡರ ಬಳಿ ಚರ್ಚೆ ನಡೆಸುತ್ತೇವೆ ಎಂದರು.

ವಕೀಲ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ತಮ್ಮ ಸೋಲಿಗೆ ಬೇರೆಯವರ ಮೇಲೆ ಗೂಬೆ ಕೂಡಿಸುವುದು ಸರಿಯಲ್ಲ. ಪಕ್ಷದ ನಿರ್ದೇಶಕರು ವಿಪಕ್ಷದವರಿಗೆ ಮತದಾನ ಮಾಡಿರುವ ಕುರಿತು ಪಕ್ಷದ ಮುಖಂಡರು ರ್ಚಚಿಸಬೇಕು ಎಂದರು.

ಎಪಿಎಂಸಿ ಉಪಾಧ್ಯಕ್ಷ ಉಳಿವೆಪ್ಪ ಕುರವತ್ತಿ, ಮಾಜಿ ಸದಸ್ಯ ಶಶಿಧರ ದೊಡ್ಡಮನಿ, ರಮೇಶ ಮೋಟೆಬೆನ್ನೂರು, ಗಂಗಾಧರ ಹಿರೇಮಠ, ಮಂಜುನಾಥ ಬೋವಿ, ಮಹೇಶ ಉಜನಿ, ಶಫೀ ಮುಲ್ಲಾ, ಉದಯ ಚೌದರಿ, ಇತರರು ಇದ್ದರು.