ಜಿಲ್ಲೆ

ಕುಸಿದ ತರಕಾರಿ, ಹೂವಿನ ಬೆಲೆ

ಎನ್.ವೆಂಕಟೇಶ್

ಗ್ರಾಹಕರಿಗೆ ಖುಷಿ, ಬೆಳೆಗಾರರು ಕಂಗಾಲು
ಸ್ಥಳೀಯ ಮಾರುಕಟ್ಟೆಗೆ ಹೆಚ್ಚಿದ ಪೂರೈಕೆ

ಗುಡಿಬಂಡೆ: ಮಾರುಕಟ್ಟೆಗಳಿಗೆ ತರಕಾರಿ ಮತ್ತು ಹೂವಿನ ದಾಸ್ತಾನು ಹೆಚ್ಚಿಗೆ ಬರುತ್ತಿರುವುದರಿಂದ ಉತ್ತಮವಾಗಿದ್ದ ಬೆಲೆಗಳು ದಿಢೀರ್ ಕುಸಿದಿದ್ದು ಒಂದು ಕಡೆ ಬೆಳೆಗಾರರು ಕಂಗಾಲಾಗಿದ್ದರೆ ಮತ್ತೊಂದೆಡೆ ಗ್ರಾಹಕರು ಖುಷಿ ಪಡುವಂತಾಗಿದೆ.
ಆಷಾಢ ಮಾಸದಲ್ಲಿ ಎಲ್ಲ ತರಕಾರಿಗಳು ಹಾಗೂ ಹೂವುಗಳ ಬೆಲೆ ಉತ್ತಮವಾಗಿತ್ತು. ಶ್ರಾವಣ ಬರುತ್ತಿದ್ದಂತೆ ಬೆಲೆಗಳು ದಿಢೀರ್ ಕುಸಿತ ಕಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದಕ್ಕೆ ಉತ್ಪಾದನೆ ಹೆಚ್ಚಿರುವುದು ಮತ್ತು ಮಾರುಕಟ್ಟೆಗೆ ಹೆಚ್ಚು ತರಕಾರಿ ಹಾಗೂ ಹೂವು ಸರಬರಾಜಾಗುವುದು ಕಾರಣ ಎನ್ನುತ್ತಾರೆ ರೈತರು.

ಹೆಚ್ಚಾಗಿ ಬೆಳೆಯುವ ಬೀನ್ಸ್, ಮೆಣಸಿನಕಾಯಿ, ಹೂಕೋಸು, ಗಡ್ಡೆಕೋಸು, ಟೊಮ್ಯಾಟೊ, ಈರುಳ್ಳಿ, ಬದನೇಕಾಯಿ ಸೇರಿ ಇತರ ಎಲ್ಲ ತರಕಾರಿಗಳ ಬೆಲೆ ಕುಸಿದಿದೆ. ಕಳೆದ ತಿಂಗಳು ಕೆ.ಜಿ.ಗೆ 70ರಿಂದ 80ರೂ.ಗಳಿಗೆ ಮಾರಾಟವಾಗುತ್ತಿದ್ದ ಬೀನ್ಸ್ ಬೆಲೆ ಈಗ 20-25 ರೂ.ಗಳಿಗೆ ಇಳಿಕೆ ಕಂಡಿದೆ. 60 ರಿಂದ 70ರೂ.ಗಳಿದ್ದ ಮೆಣಸಿನಕಾಯಿ ಬೆಲೆ ಈಗ 15-18ರೂ.ಗಳಿಗೆ ಕುಸಿದಿದೆ. ಇದೇರೀತಿ ಇತರ ತರಕಾರಿ ಬೆಳೆಗಳ ಬೆಲೆಯೂ ಕಡಿಮೆಯಾಗಿದೆ.

ಹೂವಿನ ಬೆಲೆಯೂ ಕುಸಿತ
ಒಂದು ಕಡೆ ತರಕಾರಿ ಬೆಲೆ ಕುಸಿದು ರೈತರು ಕಂಗಾಲಾಗಿದ್ದರೆ ಮತ್ತೊಂದು ಕಡೆ ಹೂವುಗಳ ಬೆಲೆಯು ಸಹ ದಿಢೀರ್ ಕುಸಿದಿದೆ. ಆಷಾಢ ಮಾಸದಲ್ಲಿ ಪ್ರತಿ ಕೆಜಿ ಸೆಂಟ್‌ಯೆಲ್ಲೋ 300 ರಿಂದ 400ರೂ. ಇದ್ದಿದ್ದು, ಈಗ 40-50 ರೂ.ಗಳಿಗೆ ಕುಸಿದಿದೆ. ಇನ್ನು ಚೆಂಡು ಹೂವನ್ನಂತೂ ಕೊಳ್ಳುವವರೇ ಇಲ್ಲದೇ ಬಿಸಾಡಿ ಬರುವ ಪರಿಸ್ಥಿತಿ ಉಂಟಾಗಿದೆ.


"ಉತ್ತಮ ಬೆಲೆಗೆ ಮಾರಾಟವಾಗುತ್ತಿದ್ದ ತರಕಾರಿ ಹಾಗೂ ಹೂವಿನ ಬೆಲೆಗಳು ಆಷಾಢ ಮುಗಿಯುತ್ತಿದ್ದಂತೆ ಉತ್ತಮ ದಿಢೀರ್ ಕುಸಿದಿವೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ಪ್ರೋತ್ಸಾಹಧನ ನೀಡಬೇಕು."
ಸೋಮಶೇಖರ್, ರೈತ ಸಂಘದ ತಾಲೂಕು ಅಧ್ಯಕ್ಷ, ಗುಡಿಬಂಡೆ