ಜಿಲ್ಲೆ

ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಸೀಟು ಕಡಂಬಳ್ಳಿ ರಸ್ತೆಯ ಕೊಡಂಗೆ ಸಮೀಪ ಭಾನುವಾರ ಸಂಜೆ ಮಳೆಯೊಂದಿಗೆ ಬೀಸಿದ ಭಾರಿ ಗಾಳಿಗೆ, ಮರ ವಿದ್ಯುತ್ ಲೈನ್ ಮೇಲೆ ಉರುಳಿ ಬಿದ್ದು ಮೂರು ಎಚ್‌ಟಿ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ವ್ಯತ್ಯಯಗೊಂಡಿತು.

ರಸ್ತೆ ಮೇಲೆ ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದ ಕಾರಣ ಎರಡು ತಾಸಿಗಿಂತ ಅಧಿಕ ಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಮೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಲ್ಲಿ ವಿದ್ಯುತ್ ಕಂಬ ಮತ್ತು ಮರವನ್ನು ತೆರವುಗೊಳಿಸಲಾಯಿತು.

ದಿಡುಪೆ ರಸ್ತೆಗೆ ಮತ್ತೆ ಉರುಳಿದ ಕಂಬ

ದಿಡುಪೆ ಪೈಚಾರು ರಾಜ್ಯ ಹೆದ್ದಾರಿಯ ಮುಂಡಾಜೆ ದಿಡುಪೆ ರಸ್ತೆಯ ಬಸವದಡ್ಡು ಎಂಬಲ್ಲಿ ಭಾನುವಾರ ಮುಂಜಾನೆ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಮೂರು ಕಂಬಗಳು ಮುರಿದು ಬಿದ್ದಿದ್ದವು. ಈ ವೇಳೆ ಬಾಗಿ ನಿಂತಿದ್ದ ಇನ್ನೆರಡು ಕಂಬಗಳು ಭಾನುವಾರ ರಾತ್ರಿ ಧರಾಶಾಯಿಯಾಗಿವೆ. ಪರಿಸರದ ನೂರಾರು ಮನೆಗಳಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಬಳಕೆದಾರರು ಪರದಾಡುವಂತಾಗಿದೆ. ಸೋಮವಾರ ಮೆಸ್ಕಾಂ ಕಂಬಗಳ ಮರು ಅಳವಡಿಕೆಗೆ ಮುಂದಾಗಿದೆ.