ಜಿಲ್ಲೆ

ಯರಗುಪ್ಪಿಯಲ್ಲಿ ಹೆಜ್ಜೆಮೇಳ ಯರೇಕಿತ್ತೂರಿನ ಫಕೀರೇಶ್ವರ ತಂಡ ಪ್ರಥಮ

ಕುಂದಗೋಳ: ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಮೊಹರಂ ಹಬ್ಬದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಹೆಜ್ಜೆಮೇಳ ಸ್ಪರ್ಧೆಯು ಜನಮನಸೂರೆಗೊಂಡಿತು.


ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಂ.ಆರ್. ಪಾಟೀಲ, ಯರಗುಪ್ಪಿ ಗ್ರಾಮದ ಮೊಹರಂ ಹಬ್ಬ ರಾಜ್ಯದಲ್ಲೇ ಪ್ರಸಿದ್ಧವಾಗಿದೆ. ಇಲ್ಲಿ ಏಳು ಡೋಲಿಗಳ ಸಮಾಗಮ ನೋಡುವುದೇ ಒಂದು ಸೌಭಾಗ್ಯ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದನ್ನು ನೋಡಿದರೆ ಗ್ರಾಮೀಣ ಭಾಗದ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಬೆಲೆ ಇದೆ ಎಂದು ಗೊತ್ತಾಗುತ್ತದೆ ಎಂದರು.


ಸಾನ್ನಿಧ್ಯವನ್ನು ಬೊಮ್ಮನಹಳ್ಳಿ ವಿರಕ್ತಮಠದ ಶ್ರೀ ಶಿವಯೋಗಿಶ್ವರ ಸ್ವಾಮೀಜಿ, ಕಲ್ಯಾಣಪುರ ಮಠದ ಬಸವಣ್ಣಜ್ಜನವರು ವಹಿಸಿದ್ದರು.
ಕಾಂಗ್ರೆಸ್ ಕಿಸಾನ್ ಜಿಲ್ಲಾ ಘಟಕದ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಮಾತನಾಡಿದರು. ರಾಜ್ಯದ ವಿವಿಧ ಕಡೆಗಳಿಂದ 15ಕ್ಕೂ ಹೆಚ್ಚು ಹೆಜ್ಜೆಮೇಳ ತಂಡಗಳು ಭಾಗವಹಿಸಿದ್ದವು.

ಯರೇಕಿತ್ತೂರ ಗ್ರಾಮದ ಫಕೀರೇಶ್ವರ ಹೆಜ್ಜೆ ಮೇಳೆ ತಂಡ ಪ್ರಥಮ ಸ್ಥಾನ ಪಡೆದು 10 ಗ್ರಾಂ ಬಂಗಾರ, ಕೊಣ್ಣೂರು ಗ್ರಾಮದ ಸಯ್ಯದಭಾಷಾ ಹೆಜ್ಜೆಮೇಳ ದ್ವಿತೀಯ ಸ್ಥಾನ ಪಡೆದು 7.5 ಗ್ರಾಂ ಬಂಗಾರ, ಕಿತ್ತೂರು ಗ್ರಾಮದ ಕನಕದಾಸ ಹೆಜ್ಜೆಮೇಳ ತೃತೀಯ ಸ್ಥಾನ ಪಡೆದು 5 ಗ್ರಾಂ ಬಂಗಾರ ಹಾಗೂ ನೀಲಗುಂದ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಹೆಜ್ಜೆಮೇಳ ತಂಡ ಚತುರ್ಥ ಬಹುಮಾನ 2.5 ಗ್ರಾಂ ಬಂಗಾರ ಪಡೆದುಕೊಂಡವು.


ಗ್ರಾಪಂ ಅಧ್ಯಕ್ಷೆ ರೇಣುಕಾ ದುಂಡಿ, ಉಪಾಧ್ಯಕ್ಷ ಶಿವಾನಂದ ಕುಸುಗಲ್, ಸದಸ್ಯರಾದ ರವಿ ಕುಂಬಾರ, ಭೀಮಪ್ಪ ಮಾಯಣ್ಣವರ, ಎಂ.ಬಿ. ತಡಸದ, ಚನ್ನಪ್ಪ ಹಳ್ಳಿಕೇರಿ, ಮಹೇಶ ಅಣ್ಣಿಗೇರಿ, ಶ್ರೀಕಾಂತ ಯಕ್ಕಣ್ಣವರ, ಮುಖಂಡರಾದ ಅಡಿವೆಪ್ಪ ಶಿವಳ್ಳಿ, ಗೌಡಪ್ಪಗೌಡ ಪಾಟೀಲ, ಅಮರಶಿವ ಶಿವಳ್ಳಿ, ಮಾಲತೇಶ ಶ್ಯಾಗೋಟಿ, ಫಕೀರೇಶ ದುಂಡಿ ಇದ್ದರು.