ಮಂಗಳೂರು: ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸ್ ಎಂದು ಬೆದರಿಸಿ ಮಹಿಳೆಯೊಬ್ಬರಿಂದ 38 ಸಾವಿರ ರೂ. ವಸೂಲಿ ಮಾಡಿದ ನಕಲಿ ಪೊಲೀಸ್‌ನ್ನು ಕಾವೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕಾವೂರು ಈಶ್ವರ ನಗರದ ಸರ್ಕಾರಿ ಗುಡ್ಡೆ ನಿವಾಸಿ ಶಿವರಾಜ್ (26) ಬಂಧಿತ ಆರೋಪಿ. ಮಸಾಜ್ ಪಾರ್ಲರ್ ನಡೆಸುವುದಕ್ಕೆ, ಹೆಚ್ಚು ಹಣ ಮತ್ತು ಬಂಗಾರ ಇದೆಯೆಂದು ದೂರು ಬಂದಿದೆ. ಪ್ರಕರಣ ಮುಚ್ಚಿ ಹಾಕಲು ಹಣ ಕೊಡಬೇಕು. ಇಲ್ಲದಿದ್ದರೆ ದಾಳಿ ಮಾಡುತ್ತಾರೆ. ಕಮಿಷನರ್ ಸಾಹೇಬ್ರ ಬಳಿಗೆ ನಿಮ್ಮ ಕೇಸ್ ಹೋಗಿದೆ, ಹಣ ಕೊಟ್ಟರೆ ಪ್ರಕರಣ ಮುಚ್ಚಿ ಹಾಕುತ್ತೇನೆ ಎಂದು ಹೇಳಿದ್ದ. ಆರೋಪಿ ಪಾಂಡೇಶ್ವರ ಠಾಣೆಯ ಶಿವರಾಜ್ ದೇವಾಡಿಗ ಎಂದು ಪರಿಚಯ ಮಾಡಿಕೊಂಡಿದ್ದ. ಸಾಹೇಬ್ರು ಈಗ ರೈಡ್ ಮಾಡ್ತಾರೆ, ಗೂಗಲ್ ಪೇ ಮಾಡಿ ಹಣ ಕೊಟ್ಟರೆ ರೈಡ್ ಮಾಡಲ್ಲ ಅಂತ ಹೇಳಿದ್ದ.
ಆನಂತರ ತನ್ನ ನಂಬರಿನಿಂದ ಕರೆ ಮಾಡಿ ಅದೇ ನಂಬರ್‌ಗೆ ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದ ಮೊದಲಿಗೆ 20 ಸಾವಿರ ರೂ., ಆನಂತರ 18 ಸಾವಿರ ರೂ. ಹೀಗೆ ಒಟ್ಟು 38 ಸಾವಿರ ರೂ. ನೀಡಿದ್ದರು.
ಪೊಲೀಸರ ರೀತಿ ಸಮವಸ್ತ್ರ, ಖಾಕಿ ಶೂ ಹಾಕಿ ಬಂದು ಬೆದರಿಸಿದ್ದರಿಂದ ಹೆದರಿದ್ದ ಮಹಿಳೆ, ಹಣ ಕೊಟ್ಟಿದ್ದರು. ಅಲ್ಲದೆ, ಹೊಸ ಕಮಿಷನರ್ ಬಂದಿದ್ದಾರೆ. ಅವರ ಟೇಬಲ್ ಮೇಲೆ ಫೈಲ್ ಇದೆ. ಕೇಸ್ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದಿದ್ದ. ಈ ಬಗ್ಗೆ ಮಹಿಳೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು. ಪೊಲೀಸರ ಸೋಗಿನಲ್ಲಿ ಹಣ ಪೀಕಿಸಿದ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಮಹಿಳೆಯನ್ನು ಸಂಪರ್ಕಿಸಿದ ಕಾವೂರು ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ.