ಮೈಸೂರು: ರಾಜ್ಯದಲ್ಲಿ ಅಭಿವೃದ್ಧಿ ಆಗಿದ್ದರೆ ತಾನೇ ಟ್ರೇಲರ್. ಸುಳ್ಳಿನ ಪಿಕ್ಚರ್ ಅವರದ್ದು ಬಾಕಿ ಇರಬಹುದು. ಈವರೆಗೆ ಅವರು ಹೇಳಿರುವುದೆಲ್ಲ ಬರೀ ಸುಳ್ಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅಭಿವೃದ್ಧಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ಹೀಗೆ ತಿರುಗೇಟು ನೀಡಿದರು.
ಬಿಜೆಪಿ ಕೇವಲ 200 ಲೋಕಸಭಾ ಸೀಟುಗಳನ್ನು ಗೆಲ್ಲುವುದೂ ಕಷ್ಟ ಎನ್ನುವುದು ಅವರೇ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಹೀಗಾಗಿ, ತಂತ್ರಗಾರಿಕೆ ಭಾಗವಾಗಿ 400 ಸೀಟು ಗೆಲ್ಲುವುದಾಗಿ ಹೇಳುತ್ತಿದೆ. ದೇಶದ ಜನರನ್ನು ನಿರಂತರವಾಗಿ ಮೂರ್ಖರನ್ನಾಗಿಸುತ್ತೇವೆ ಎಂದು ಹೊರಟವರೇ ಜನರ ಎದುರು ಮೂರ್ಖರಾಗುತ್ತಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯದ್ದು ಅಭಿವೃದ್ಧಿ ಶೂನ್ಯ ಸಾಧನೆ. ಸುಳ್ಳಿನ ಕನಸುಗಳನ್ನು ಬಿತ್ತುತ್ತಾ ಬಂದಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ 20 ಸೀಟುಗಳವರೆಗೆ ಗೆದ್ದೇ ಗೆಲ್ಲುತ್ತದೆ. ಸೋಲುವ ಭಯಕ್ಕೆ ಒಳಗಾಗಿರುವ ಬಿಜೆಪಿಯವರು ಕರ್ನಾಟಕದಲ್ಲಿ ಬಿಜೆಪಿ 28 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಜರಿದರು.
ಈ ಬಾರಿ ಬಿಜೆಪಿಯವರ ಸುಳ್ಳಿಗೆ ಯಾರು ಸಹ ಮರುಳಾಗುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲೂ ಮೋದಿ ಅವರು ಪ್ರಚಾರ ಕೈಗೊಂಡಿದ್ದರೂ ಬಿಜೆಪಿ ಗೆಲ್ಲಲು ಸಾಧ್ಯವಾಗಲಿಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರದ ವೈಫಲ್ಯಗಳು ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಈ ಸಲ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವನ್ನು ಖಾತ್ರಿಪಡಿಸಿದೆ ಎಂದರು.
ಮೋದಿ ಅವರು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿ ಮಾತನಾಡಿ ನಮ್ಮ ಗ್ಯಾರಂಟಿ ಪದವನ್ನೇ ಕದ್ದಿದ್ದಾರೆ ಎಂದು ಕುಟುಕಿದರು.
ಯತೀಂದ್ರ ಹೇಳಿಕೆಯಲ್ಲಿ ತಪ್ಪೇನಿದೆ?
ಕೇಂದ್ರ ಸಚಿವ ಅಮಿತ್ ಷಾ ಗೂಂಡಾ ಎಂದು ಡಾ.ಯತೀಂದ್ರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸಿಎಂ, ಯತೀಂದ್ರ ಹೇಳಿರುವುದರಲ್ಲಿ ತಪ್ಪೇನಿದೆ? ಸಿಬಿಐ ಹೇಳಿರುವುದನ್ನು ಯತೀಂದ್ರ ಹೇಳಿದ್ದಾನೆ. ಅದು ಅವನು ಬಳಸಿರುವ ಪದವಲ್ಲ. ಸಿಬಿಐ ವರದಿಯಲ್ಲಿರುವ ಪದ. ಅದನ್ನೇ ಅವನು ಉಲ್ಲೇಖಿಸಿದ್ದಾನೆ. ಬಿಜೆಪಿಯವರಿಗೆ ಸಂಸ್ಕಾರವೇ ಗೊತ್ತಿಲ್ಲ. ಅವರು ಯತೀಂದ್ರನಿಗೆ ಸಂಸ್ಕಾರ ಹೇಳಿಕೊಡಲು ಬಂದಿದ್ದಾರೆ ಎಂದು ತಿರುಗೇಟು ನೀಡಿದರು.