ಬೆಳಗಾವಿ: ನಗರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭ ಮೂಲ ಗಾಂಧಿ ವಿಚಾರಗಳ ಬದಿಗಿಟ್ಟು, ಸರ್ಕಾರದ ತೆರಿಗೆ ಹಣದಲ್ಲಿ ಕಾಂಗ್ರೆಸ್ ಪಕ್ಷ ನಕಲಿ ಗಾಂಧಿಗಳ ಸಮಾವೇಶ ಮಾಡುತ್ತಿದೆ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಂತಂತ್ರ್ಯ ಹೋರಾಟಕ್ಕಾಗಿ ಹುಟ್ಟಿಕೊಂಡಿದ್ದ ಅಂದಿನ ಕಾಂಗ್ರೆಸ್ ಪಕ್ಷಕ್ಕೂ, ಇಂದಿನ ಸೋನಿಯಾ, ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ನಡೆಯುತ್ತಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಜಾತ್ಯತೀತ ಮತ್ತು ಪಕ್ಷಾತೀತವಾಗಿ ನಡೆಯಬೇಕಿತ್ತು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ 25 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಆದರೆ, ಇದು ಸರ್ಕಾರದ ಕಾರ್ಯಕ್ರಮವಾಗದೆ, ಕೇವಲ ಕಾಂಗ್ರೆಸ್ ಕಾರ್ಯಕ್ರಮವಾಗಿದೆ. ಕಾಂಗ್ರೆಸ್ ಗಾಂಧೀಜಿ ಅವರಿಗೆ ಶೋಭೆ ತರುವ ಕೆಲಸ ಮಾಡುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿಯ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಗಾಂಧೀಜಿ ಅವರ ವಿಚಾರಧಾರೆಗಳನ್ನು ಜನರಿಗೆ ಮುಟ್ಟಿಸುವ ಹಾಗೂ ಅಂದಿನ ಅಧಿವೇಶನದ ಕುರಿತು ಬೆಳಕು ಚೆಲ್ಲುವ ಕಾರ್ಯಕ್ರಮವಾಗದೆ. ಇಂದಿನ ಕಾಂಗ್ರೆಸ್ ನಾಯಕರನ್ನು ಬಿಂಬಿಸುವ ಕಾರ್ಯಕ್ರಮವಾಗುತ್ತಿದೆ. ಜತೆಗೆ ಸ್ಥಳೀಯ ಬಿಜೆಪಿ ಶಾಸಕ, ಸಂಸದರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲಂಸಿದ್ದಾರೆಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಗೀತಾ ಸುತಾರ, ಸುಭಾಷ ಪಾಟೀಲ ಇತರರಿದ್ದರು.
ಅಧಿವೇಶನದ ವೇಳೆ ಬಿಜೆಪಿಯ ವಿಪ ಸದಸ್ಯ ಸಿ.ಟಿ.ರವಿ ಅವರ ಮೇಲೆ ಕಾಂಗ್ರೆಸ್ ಗುಂಡಾಗಳಿಂದ ನಡೆದ ಹಲ್ಲೆ ಯತ್ನ ಹಾಗೂ ಪೊಲೀಸರು ನಡೆಸಿಕೊಂಡ ರೀತಿ ಖಂಡಿಸಿ ಬೆಳಗಾವಿಯಲ್ಲಿ ಡಿ.26 ರಂದು ಬೃಹತ್ ಪ್ರತಿಭಟನೆ ನಡೆಸಲು ಪಕ್ಷದ ನಾಯಕರಲ್ಲಿ ಅನುಮತಿ ಕೇಳಲಾಗಿದೆ. ಅನುಮತಿ ದೊರೆತಲ್ಲಿ ಪ್ರತಿಭಟನೆ ನಡೆಸಲಾಗುವುದು.
ಅಭಯ ಪಾಟೀಲ ಶಾಸಕ