ಬಳ್ಳಾರಿ: ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಶಾಲೆಯಲ್ಲಿ ನಕಲಿ ದಾಖಲಾತಿ ಸೃಷ್ಟಿಸಿದ ಆರೋಪ ಹಿನ್ನೆಲೆಯಲ್ಲಿ ಮಾಜಿ ಸಚಿವ, ಶಾಸಕ ಪಿಟಿ ಪರಮೇಶ್ವರ ನಾಯ್ಕ್ ಹಾಗೂ ಪುತ್ರ ಭರತ್ ವಿರುದ್ಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪಿಟಿ ಭರತ್ ಹರಪನಹಳ್ಳಿ ತಾಲೂಕು ಲಕ್ಷ್ಮಿಪುರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾಗಿದ್ದಾರೆ. 2016ರಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಸಮಯದಲ್ಲಿ ಭರತ್ ವಯಸ್ಸು 21 ವರ್ಷಕ್ಕಿಂತ ಕಡಿಮೆ ಇತ್ತು. ಆಗ ಪಿಟಿ ಪರಮೇಶ್ವರ ನಾಯ್ಕ್ ಅವರು ಕಾರ್ಮಿಕ ಸಚಿವರಾಗಿದ್ದರು. ಇದನ್ನು ದುರುಪಯೋಗಪಡಿಸಿಕೊಂಡು ತಮ್ಮ ಪ್ರಭಾವ ಬೀರಿ ಭರತ್ಗೆ 21 ವರ್ಷವಾಗಿದೆ ಎಂದು ನಕಲಿ ದಾಖಲೆ ಸೃಷ್ಟಿದ್ದರು ಎಂದು ಆರೊಪ ಕೇಳಿಬಂದಿದೆ.
ಹರಪನಹಳ್ಳಿ ವಕೀಲ ರೇವನೌಡ 2016ರಲ್ಲೇ ಈ ಸಂಬಂಧ ದೂರು ನೀಡಿದ್ದರು. ವಿಚಾರಣೆ ಸಂದರ್ಭದಲ್ಲಿ ಸಂಗ್ರಹವಾದ ದಾಖಲೆಗಳನ್ನು ಎಫ್ಎಸ್ಎಲ್ ಮಡಿವಾಳ ತಜ್ಞರಿಗೆ ಕಳಿಸಲಾಗಿತ್ತು. ಈಗ ವರದಿ ಬಂದ ಹಿನ್ನೆಲೆಯಲ್ಲಿ ಭರತ್ ಹಾಗೂ ಪಿಟಿ ಪರಮೇಶ್ವರ ನಾಯ್ಕ್ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿದ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ದವೂ ಪ್ರಕರಣ ದಾಖಲಾಗಿದೆ. ಪರಮೇಶ್ವರ ನಾಯ್ಕ್ ಎ1, ಭರತ್ ಎ2 ಹಾಗೂ ಮುಖ್ಯೋಪಾಧ್ಯಾಯ ರಾಜಾ ಸೋಮಶೇಖರ ಎ3 ಆರೋಪಿಯಾಗಿದ್ದಾರೆ. (ದಿಗ್ವಿಜಯ ನ್ಯೂಸ್)