ಕಾರವಾರ: ಜಿಲ್ಲಾಧಿಕಾರಿ ಆದೇಶ ಪತ್ರವನ್ನು ನಕಲು ಮಾಡಿ ಭೂಮಿ ಮಂಜೂರಿ ಮಾಡಿಸಲು ಪ್ರಯತ್ನಿಸಿ ಪ್ರಕರಣವೊಂದು ಪತ್ತೆಯಾಗಿದೆ. ಈ ಸಂಬಂಧ ಶಿರಸಿ ತಾಲೂಕಿನ ಇಬ್ಬರ ವಿರುದ್ಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಸನಕೊಪ್ಪದ ಬಸವರಾಜ ವೀರಭದ್ರಪ್ಪ ಇಟಗಿ ಹಾಗೂ ಬಿಬಿಜಾನ್ ಸಯ್ಯದ್ ಹುಸೇನ್‌ಸಾಬ್ ಹೆಬ್ಬತ್ತಿ ವಿರುದ್ಧ ಬನವಾಸಿ ಹೋಬಳಿ ಕಂದಾಯ ನಿರೀಕ್ಷಕಿ ಮಂಜುಳಾ ಟಿ.ನಾಯ್ಕ ದೂರು ದಾಖಲಿಸಿದ್ದಾರೆ.
ಈ ಇಬ್ಬರು ಕಾರವಾರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ ತಮ್ಮ ಅತಿಕ್ರಮಣ ಜಮೀನು ಸಕ್ರಮಗೊಳಿಸಲಾಗಿದ್ದು, ಹೆಸರನ್ನು ಪಹಣಿಯಲ್ಲಿ ನಮೂದಿಸಬೇಕು ಎಂದು ಮನವಿ ಮಾಡಿದ್ದರು.
ಅರ್ಜಿಯ ಜತೆ ಸರ್ಕಾರ ಮಾಡಿದ ಆದೇಶ ಹಾಗೂ ಜಿಲ್ಲಾಧಿಕಾರಿ ಅವರು ಮಾಡಿದ ಆದೇಶ ಪ್ರತಿಯನ್ನೂ ಇಟ್ಟಿದ್ದರು. ಈ ಸಂಬಂಧ ಕಚೇರಿಯ ಸಿಬ್ಬಂದಿ ಪರಿಶೀಲಿಸಲಾಗಿ ಡಿಸಿ ಅವರ ಆದೇಶ ಇದಲ್ಲ ಎಂಬ ಅನುಮಾನ ಬಂದಿದೆ.
ಇದರಿಂದ ತನಿಖೆ ನಡೆಸುವಂತೆ ಶಿರಸಿ ತಹಸೀಲ್ದಾರ್‌ಗೆ ಸೂಚಿಸಲಾಗಿತ್ತು. ಶಿರಸಿ ತಹಸೀಲ್ದಾರ್ ಇಬ್ಬರಿಗೂ ನೋಟಿಸ್ ನೀಡಿ, ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಆದರೆ, ಇಬ್ಬರೂ ಹಾಜರಾಗದ ಕಾರಣ ಹಿನ್ನೆಲೆಯಲ್ಲಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಇಬ್ಬರ ವಿರುದ್ಧ ಫೋರ್ಜರಿ, ವಂಚನೆ ಪ್ರಕರಣ ವನ್ನು ಕಂದಾಯ ನಿರೀಕ್ಷಕಿ ಮಂಜುಳಾ ನಾಯ್ಕ ಪ್ರಕಟಿಸಿದ್ದಾರೆ.